ಸಿದ್ದರಾಮಯ್ಯಗೆ ಕ್ಲೀನ್​ಚಿಟ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿಯಮ ಉಲ್ಲಂಘಿಸಿ ಕೃಷಿ ಭೂಮಿಯಲ್ಲಿ ಮನೆ ನಿರ್ವಿುಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲಕ್ಷ್ಮೀಪುರಂ ಠಾಣೆಗೆ ನೀಡಿದ್ದ ದೂರಿನಲ್ಲಿ ಸತ್ಯಾಂಶ ಇಲ್ಲವೆಂದು ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದಾರೆ.

ತಪ್ಪುಗ್ರಹಿಕೆಯಿಂದ ದೂರು ನೀಡಲಾಗಿದೆ. ಪ್ರಕರಣದಲ್ಲಿ ಸತ್ಯಾಂಶ ಇಲ್ಲ ಎಂಬ ವರದಿಯನ್ನು ನವೆಂಬರ್ ಮೊದಲ ವಾರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್, ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ವಿವರ: 1981ರಲ್ಲಿ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ(ಸಿಐಟಿಬಿ)ಯಿಂದ ವಿಜಯನಗರ 2ನೇ ಹಂತ ಬಡಾವಣೆ ನಿರ್ವಣಕ್ಕೆ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 535 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಬಡಾವಣೆ ರಚಿಸಿ, ನಿವೇಶನ ಹಂಚಿಕೆ ನಂತರ ಹಿನಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪಾಪಣ್ಣ, 30 ಗುಂಟೆ ಕೃಷಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಮುಡಾ ಅಧಿಕಾರಿಗಳು 30 ಗುಂಟೆ ಜಾಗ ಡಿ-ನೋಟಿಫೈ ಮಾಡಿ ನಿರಾಕ್ಷೇಪಣಾ ಪತ್ರ ನೀಡಿದ್ದರು. ಬಳಿಕ ಈ ಭೂಮಿಯನ್ನು ಕುಟುಂಬದವರು ಹಂಚಿಕೊಂಡಿದ್ದರು.

ಈ ಪೈಕಿ ಪಾಪಣ್ಣ ಅವರ ಚಿಕ್ಕಮ್ಮ ಸಾಕಮ್ಮ ಪಾಲಿಗೆ ಬಂದಿದ್ದ 10 ಗುಂಟೆ ಜಮೀನನ್ನು ಸಿದ್ದರಾಮಯ್ಯ ಅವರು ಖರೀದಿಸಿ ಮನೆ ನಿರ್ವಿುಸಿದ್ದರು. ನಂತರ, 2003ರಲ್ಲಿ ಆ ಮನೆ ಮಾರಾಟ ಮಾಡಿದ್ದರು. ಆಗ ಸಾಕಮ್ಮಗೆ ಮುಡಾ ಬದಲಿ ನಿವೇಶನ ನೀಡಿತ್ತು. 2017ರ ಡಿಸೆಂಬರ್​ನಲ್ಲಿ ಮತ್ತೆ ನಿವೇಶನ ನೀಡುವಂತೆ ಸಾಕಮ್ಮ ಪರವಾಗಿ ಕುಟುಂಬದವರು ಅರ್ಜಿ ಸಲ್ಲಿಸಿದ್ದರು. ಅಂದಿನ ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್ ಸಾಮಾನ್ಯ ಸಭೆಯಲ್ಲಿ ಅರ್ಜಿ ಮಂಡಿಸಿ, ಮತ್ತೊಂದು ನಿವೇಶನ ನೀಡಲು ಅನುಮೋದನೆ ಪಡೆದಿದ್ದರು. ಈ ಸಂಬಂಧ ಗಂಗರಾಜು ಎಂಬುವರು ಮೈಸೂರಿನ 2ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಲಯ, ದೂರು ದಾಖಲಿಸಿ, ತನಿಖೆ ನಡೆಸುವಂತೆ ಲಕ್ಷ್ಮೀಪುರಂ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.