ಸಚಿವ ಶಿವಳ್ಳಿ ಸಾವಿಗೆ ಕಂಬಿನಿ ಮಿಡಿದ ರಾಜಕೀಯ ನಾಯಕರು; ಸರಳ, ಸಜ್ಜನಿಕೆಯ ರಾಜಕಾರಣಿಗೆ ನುಡಿ ನಮನ

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್​.ಶಿವಳ್ಳಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಹಾಸನದ‌ ಜೆಡಿಎಸ್ ಪ್ರಚಾರಸಭೆಯಲ್ಲಿ ಸಂತಾಪ ಸೂಚಿಸಿದ ಸಿಎಂ ನಿನ್ನೆ ತಾನೇ ಧಾರವಾಡ ಕಟ್ಟಡ ಕುಸಿತದ ಪರಿಶೀಲನೆಯಲ್ಲಿ ನನ್ನ ಜತೆ ರಾತ್ರಿ 9 ಗಂಟೆವರೆಗೂ ಇದ್ದರು. ಅವರು ಹೃದಯಾಘಾತದಿಂದ ಅಗಲಿರುವುದು ದುಃಖದ ವಿಷಯ ಎಂದು ಶಿವಳ್ಳಿ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿದರು.

ಅತ್ಯಂತ ಸರಳ ವ್ಯಕ್ತಿತ್ವದ ಮನುಷ್ಯ
ಶಿವಳ್ಳಿ ಅತ್ಯಂತ ಸರಳ ವ್ಯಕ್ತಿತ್ವದ ಮನುಷ್ಯ. ಅವರು ಅಗಲಿಕೆಯ ನೋವಿನಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳ ಜತೆ ನಾನು ಭಾಗಿಯಾಗಿದ್ದೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.

ಸರಳ, ಸಜ್ಜನಿಕೆಯ ರಾಜಕಾರಣಿ
ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ ಎಂಬ ವಿಷಯ ಅತ್ಯಂತ ಆತಂಕ ಮೂಡಿಸಿದೆ. ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರ ಅಗಲಿಕೆ ನೋವುಂಟು ಮಾಡಿದೆ. ಅವರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಅವರು ಪ್ರಾರ್ಥಿಸಿದ್ದಾರೆ.

ಇದನ್ನು ನಿರೀಕ್ಷೆ ಮಾಡಿರಲಿಲ್ಲ
ಕುಂದಗೋಳ ಶಾಸಕ, ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಸಾವಿನ ಸುದ್ದಿ ಕೇಳಿ‌ ಆಘಾತ ಆಗಿದೆ. ಅವರ ಕುಟುಂಬಕ್ಕೆ, ಬಂಧುಗಳಿಗೆ ಆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಾವೆಲ್ಲ ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. (ದಿಗ್ವಿಜಯ ನ್ಯೂಸ್​)