ಖಾತೆ ಹಂಚಿಕೆಗೆ ಗೃಹವಿಘ್ನ, ರಾಹುಲ್ ಗಾಂಧಿಗೆ ಮೊರೆ

ಬೆಂಗಳೂರು: ಸಂಪುಟ ವಿಸ್ತರಣೆ ಸೃಷ್ಟಿಸಿರುವ ಬಂಡಾಯದ ಬಿಸಿ ಆರಿತೆನ್ನುವಷ್ಟರಲ್ಲೇ ರಾಜ್ಯ ಕಾಂಗ್ರೆಸ್​ನಲ್ಲಿ ‘ಗೃಹ’ ಕದನದ ಕಿಡಿ ಸ್ಪೋಟಗೊಂಡಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಕೈನಲ್ಲಿರುವ ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ ಪೈಕಿ ಎರಡು ಖಾತೆಗಳನ್ನು ಹಿಂಪಡೆಯಬೇಕೆಂಬ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ, ಪರಮೇಶ್ವರ್ ಜತೆಗೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಕೆರಳಿಸಿದೆ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಹಂತದಲ್ಲೇ ಮುಗಿಯಬೇಕಿದ್ದ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಉಸ್ತುವಾರಿ ವೇಣುಗೋಪಾಲ್​ಗೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ನಿರ್ಧಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಂಗಳ ತಲುಪಿದೆ.

ಪರಮ ಖಾತೆಗೆ ಗೃಹಭಂಗ

ಬೆಂಗಳೂರು: ಮೈತ್ರಿ ಸರ್ಕಾರದ ನೆಮ್ಮದಿ ಭಂಗಕ್ಕೆ ಕಾರಣವಾಗಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ಸುಸೂತ್ರವಾಗಿ ಮುಗಿದಿದೆ. ಆದರೆ, ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಹಂತದಲ್ಲಿ ಮುಗಿಯಬೇಕಿದ್ದ ಖಾತೆ ಹಂಚಿಕೆ ಪ್ರಕ್ರಿಯೆ, ರಾಜ್ಯ ಉಸ್ತುವಾರಿಯಿಂದಲೂ ಸಾಧ್ಯವಾಗದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಂಗಳ ತಲುಪಿದೆ.

ಇನ್ನೊಂದೆಡೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೆಕ್ಕೆಯಲ್ಲಿರುವ ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ ಪೈಕಿ ಎರಡು ಖಾತೆಯನ್ನು ಹಿಂಪಡೆದು ನೂತನ ಸಚಿವರಿಗೆ ನೀಡುವುದು ಸೂಕ್ತವೆಂಬ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಸಲಹೆಗೆ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ವೇಣುಗೋಪಾಲ್ ನಡೆಸಿದ ಸಭೆಯಲ್ಲಿ ಇಬ್ಬರೂ ಮುಖಂಡರು ಮಾಜಿ ಸಿಎಂ ವಿರುದ್ಧ ನೇರವಾಗಿಯೇ ಹರಿಹಾಯ್ದಿದ್ದಾರೆ.

ಪಕ್ಷದ ನಾಯಕರ ಪ್ರಕಾರ ಗುರುವಾರ ರಾಹುಲ್ ಗಾಂಧಿ ಖಾತೆ ಹಂಚಿಕೆ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದು, ಎಲ್ಲ್ಲ ನಾಯಕರು ಅವರ ತೀರ್ವನವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ. ನೂತನ ಸಚಿವರ ಪೈಕಿ ಯಾರಿಗೆ ಯಾವ ಖಾತೆ ನೀಡಬೇಕೆಂಬ ಬಗ್ಗೆ ಮೂರು ದಿನಗಳಿಂದ ಕೈ ನಾಯಕರು ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಎಂಟು ಸಚಿವರ ಪೈಕಿ ಏಳು ಮಂದಿಗೆ ಖಾತೆ ಯಾವುದು ನೀಡಿದರೆ ಸೂಕ್ತ ಎಂಬ ಬಗ್ಗೆ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ.

ಎಂ.ಟಿ.ಬಿ.ನಾಗರಾಜ್, ಆರ್.ಬಿ.ತಿಮ್ಮಾಪುರ್, ಸತೀಶ್ ಜಾರಕಿಹೊಳಿ, ಶಿವಳ್ಳಿ, ರಹೀಂಖಾನ್, ತುಕಾರಾಂಗೆ ಯಾವ ಖಾತೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ಖಚಿತವಾಗಿಲ್ಲ. ವಿಚಾರ ಇರುವುದು ಗೃಹ ಖಾತೆಯದ್ದು. ಎಂ.ಬಿ.ಪಾಟೀಲ್​ಗೆ ಗೃಹ ಅಥವಾ ಗ್ರಾಮಿಣಾಭಿವೃದ್ಧಿ ಖಾತೆ ನೀಡುವ ವಿಚಾರದಲ್ಲಿ ರಾಹುಲ್ ಅಭಿಪ್ರಾಯ ನೀಡಬೇಕಿದೆ ಎಂದು ಹೇಳಲಾಗುತ್ತಿದೆ.

ಖಾತೆ ಹಂಚಿಕೆ ಸಂಬಂಧ ಚರ್ಚೆ ಆಗಿದೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಂತಿಮ ತೀರ್ಮಾನ ರಾಷ್ಟ್ರೀಯ ಅಧ್ಯಕ್ಷರೇ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕ. ರಾಮಲಿಂಗಾರೆಡ್ಡಿ ಜತೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

| ಕೆ.ಸಿ.ವೇಣುಗೋಪಾಲ್​ಕಾಂಗ್ರೆಸ್ ರಾಜ್ಯ ಉಸ್ತುವಾರಿ

ಸಂಭವನೀಯ ಖಾತೆಗಳು

# ಎಂ.ಬಿ.ಪಾಟೀಲ್- ಗೃಹ/ಬೆಂಗಳೂರು ಅಭಿವೃದ್ಧಿ/ಗ್ರಾಮೀಣಾಭಿವೃದ್ಧಿ
# ಸತೀಶ್ ಜಾರಕಿಹೊಳಿ- ಅರಣ್ಯ, ಪರಿಸರ
# ಪಿ.ಟಿ. ಪರಮೇಶ್ವರ್ ನಾಯ್ಕ್​ ಮೂಲ ಸೌಕರ್ಯ
# ತುಕಾರಾಂ- ವೈದ್ಯಕೀಯ ಶಿಕ್ಷಣ
# ಶಿವಳ್ಳಿ- ಪೌರಾಡಳಿತ
# ಎಂ.ಟಿ.ಬಿ.ನಾಗರಾಜ್- ವಸತಿ
# ತಿಮ್ಮಾಪುರ- ಕೌಶಲಾಭಿವೃದ್ಧಿ
# ರಹೀಂಖಾನ್- ಅಲ್ಪಸಂಖ್ಯಾತ ಕಲ್ಯಾಣ

ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಾಗಿಲ್ಲ. ಯಾರಿಗೆ ಯಾವ ಖಾತೆ ಎಂಬುದನ್ನು ರಾಷ್ಟ್ರೀಯ ಅಧ್ಯಕ್ಷರು ನಿರ್ಧರಿಸುತ್ತಾರೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಖಾತೆ ಹಂಚಿಕೆ ವೇಳೆ ಉ.ಕರ್ನಾಟಕಕ್ಕೆ ಆದ್ಯತೆ ನೀಡಲು ಮನವಿ ಮಾಡಿದ್ದೇವೆ.

| ರಹೀಂ ಖಾನ್ ನೂತನ ಸಚಿವ

ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ

ಬೆಳಗಾವಿ: ಖಾತೆ ಹಂಚಿಕೆ ಕುರಿತಂತೆ ಚರ್ಚೆಯಾಗಿಲ್ಲ. ಯಾವುದೇ ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇರಿಸಿಲ್ಲ. ಅಬಕಾರಿ ಹೊರತುಪಡಿಸಿ ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಂಪುಟ ವಿಸ್ತರಣೆ ನಂತರ ತಲೆದೋರಿರುವ ಭಿನ್ನಮತ ಶಮನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹುಡುಕಾಡಿ ಭೇಟಿ ಆಗಬೇಕಾಗಿದೆ. ಮೊದಲಿನಿಂದಲೂ ರಮೇಶ್ ಹಾಗೆಯೇ ಇದ್ದಾರೆ. ಸಂಜೆಯೊಳಗಾಗಿ ಅವರೊಂದಿಗೆ ಮಾತನಾಡುತ್ತೇನೆ. ರಾಜಕೀಯವಾಗಿ ಅವರಿಗೆ ತಿಳಿಸಬೇಕಿರುವುದನ್ನೆಲ್ಲ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ರಮೇಶ್​ಗೆ

ಇದುವರೆಗೂ ಕರೆ ಮಾಡಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಯತ್ನ ಜಾರಿಯಲ್ಲಿದೆ. ನನ್ನ ಮೇಲೆ ಅವರಿಗೆ ಯಾವುದೇ ಮುನಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಮೇಶ್ ಮಾಧ್ಯಮದೊಂದಿಗೆ ವರ್ತಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್, ‘ಅವರು ಸಾಕಷ್ಟು ಬದಲಾವಣೆ ಆಗಬೇಕು’ ಎಂದರು.

ಡಿಸಿಎಂ ರೆಕ್ಕೆ ಕತ್ತರಿಸಲು ಮಾಜಿ ಸಿಎಂ ಪ್ಲ್ಯಾನ್​

ಯಾರಿಗೆ ಯಾವ ಖಾತೆ ನೀಡಬೇಕೆಂಬ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಂಗಳವಾರ ರಾತ್ರಿ ಕುಮಾರಕೃಪಾ ಅತಿಥಿಗೃಹದಲ್ಲಿ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸಭೆಯಲ್ಲಿ ಅಭಿಪ್ರಾಯ ನೀಡಿದ್ದಾರೆ. ಡಿಸಿಎಂ ಬಳಿ ಇರುವ ಗೃಹ, ಬೆಂಗಳೂರು ಅಭಿವೃದ್ಧಿ ಪೈಕಿ ಒಂದು ಖಾತೆಯನ್ನು ಬೇರೆಯವರಿಗೆ ನೀಡಬೇಕೆಂಬ ಸಿದ್ದರಾಮಯ್ಯ ಸಲಹೆಗೆ ಪರಮೇಶ್ವರ್, ಈ ಎರಡೂ ಖಾತೆಯಲ್ಲಿ ಮುಂದುವರಿಯಲು ಇಚ್ಛಿಸಿರುವುದಾಗಿ ಖಡಕ್ ಅಭಿಪ್ರಾಯ ನೀಡಿದ್ದಾರೆ. ಸಲಹೆ ಮತ್ತು ಪ್ರತ್ಯುತ್ತರದ ತೀವ್ರತೆ ಅರಿತ ವೇಣುಗೋಪಾಲ್, ಈ ರೀತಿ ಬೆಳವಣಿಗೆ ಒಳ್ಳೆಯದಲ್ಲ. ನಮ್ಮ ನಮ್ಮಲ್ಲೇ ಇಂಥ ಅಭಿಪ್ರಾಯಗಳು ಬಂದರೆ ಹೊರಗೆ ಬೇರೆ ರೀತಿ ಸಂದೇಶ ಹೋಗುತ್ತದೆ ಎಂದು ಸೂಚ್ಯವಾಗಿ ಇಬ್ಬರೂ ನಾಯಕರಿಗೆ ಎಚ್ಚರಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಹ ಕೆಲಹೊತ್ತು ಉಪಸ್ಥಿತರಿದ್ದು, ವಿಚಾರವಿನಿಮಯ ಮಾಡಿಕೊಂಡರೆನ್ನಲಾಗಿದೆ. ಅಂತಿಮವಾಗಿ ರಾಹುಲ್ ಗಾಂಧಿ ಅವರೇ ಖಾತೆ ಹಂಚಿಕೆ ನಿರ್ಧಾರ ಮಾಡುವುದು ಸೂಕ್ತ, ಅವರು ಹೇಳಿದಂತೆ ಎಲ್ಲರೂ ಕೇಳುತ್ತಾರೆ ಎಂದು ವೇಣುಗೋಪಾಲ್ ಸಭೆಯಲ್ಲಿ ಹೇಳಿದರೆನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಚಾವಡಿಯಲ್ಲಿ ವಿವಿಧ ಆಯಾಮಗಳಿಂದ ಚರ್ಚೆ ನಡೆದಿದ್ದು, ಎರಡು ಪ್ರಭಾವಿ ಖಾತೆ ಹೊಂದಿರುವ ಪರಮೇಶ್ವರ್ ಶಕ್ತಿ ಕುಂದಿಸಲು ತಂತ್ರ ನಡೆದಿದೆ. ಗೃಹ ಖಾತೆಯನ್ನು ಆಪ್ತ ಎಂ.ಬಿ.ಪಾಟೀಲ್​ಗೆ ಕೊಡಿ ಸುವ ಮೂಲಕ ಸರ್ಕಾರದ ಮೇಲೆ ಹಿಡಿತ ಬಲಗೊಳಿಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆಂಬ ಮಾತುಗಳೂ ಕೇಳಿಬಂದಿವೆ.