ಸಿದ್ದರಾಮಯ್ಯ ಒಂದು ರೀತಿ ಮೊಂಡ ಇದ್ದ ಹಾಗೆ: ಡಿಸಿಎಂ ಪರಂ

ಚಾಮರಾಜನಗರ: ‘ಸಿದ್ದರಾಮಯ್ಯ ಒಂದು ರೀತಿ ಮೊಂಡ ಇದ್ದ ಹಾಗೆ’. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಾರೆ. ಯಾವ ಸಿಎಂ ಕೂಡ ಇಲ್ಲಿಗೆ ಬರಲು ಹೆದರುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಹಲವು ಸಲ ಬಂದು ಹೋಗಿದ್ದಾರೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್‌ ಹೇಳಿದ್ದಾರೆ.

ನಳಂದ ಬೌದ್ಧ ವಿಶ್ವವಿದ್ಯಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಲವು ಬಾರಿ ಬಂದಿದ್ದರು. ಇಲ್ಲಿಗೆ ಬಂದರೂ ಕೂಡ 5 ವರ್ಷ ಈ ಗಿರಾಕಿ ಅಳ್ಳಾಡಲಿಲ್ಲ. ಚಾಮರಾಜನಗರಕ್ಕೆ ಆ ರೀತಿಯ ಹೆಸರು ಬಂದಿದ್ದಕ್ಕೆ ಈ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಮಿಶ್ರ ಸರಕಾರ 5 ವರ್ಷ ಪೂರೈಸಲಿದೆ. ಎಚ್​ಡಿಕೆ 5 ವರ್ಷ ಸಿಎಂ ಆಗಿರುತ್ತಾರ ಎಂಬ ಪ್ರಶ್ನೆ ಅಪ್ರಸ್ತುತ. ಒಟ್ಟಾರೆ ಸರಕಾರ ಸುಭದ್ರವಾಗಿದೆ. ಕೇಂದ್ರ ಪ್ರಕೃತಿ ವಿಕೋಪ ಪರಿಹಾರಕ್ಕೆ ಹಣ ಕೊಟ್ಟಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಹಣ ಕೊಟ್ಟಿಲ್ಲ. ನಮ್ಮ ಸರಕಾರದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಬಿಜೆಪಿಯ ಅಶೋಕ್ ಅವರಿಗೆ ಮಾಹಿತಿ ಇಲ್ಲ. ನಮ್ಮ ಸರಕಾರ ದಿವಾಳಿಯಾಗಿದ್ದರೆ ರೈತರ ಸಾಲಮನ್ನಾ ಮಾಡುತ್ತಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಅವರಿಗೆ ಇರುವಷ್ಟು ಆಡಳಿತ ಅನುಭವ ಬಿಜೆಪಿಯವರಿಗಿಲ್ಲ. ಅವರನ್ನು ಕೇಳಿಕೊಂಡು ನಾವು ಆಡಳಿತ ನಡೆಸಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಈಗ ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ವಿವಾದ ಉಂಟಾಗುತ್ತದೆ. ನಾನು ಧರ್ಮದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರುತ್ತೇನೆ. ಈ ಹಿಂದೆ ಇದೇ ರೀತಿ ಆಗಿದೆ. ನಾನು ಸಿಎಂ ಆಗಿದ್ದಾಗ ಬಸವಾದಿ ಶರಣರು ಲಿಂಗಾಯತ ಧರ್ಮ ಮಾಡಿ ಎಂದು ಗಂಟು ಬಿದ್ದಿದ್ದರು. ಗುರು ಪರಂಪರೆಯವರು ಬಂದು ವೀರಶೈವ ಮಾಡಿ ಅಂದರು. ಈ ಬಗ್ಗೆ ನಂಗೆ ಗೊಂದಲವಾಗಿ ಮೈನಾರಿಟಿ ಕಮಿಟಿಗೆ ವರದಿ ನೀಡಲು ಹೇಳಿದೆ. ಈ ಬಗ್ಗೆ ಮಾತಾಡುವಾಗ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತರರು ಇದ್ದರು. ಇವರು ಮಾಡಿಕೊಂಡದ್ದಕ್ಕೆ ನನಗೆ ಅಪಪ್ರಚಾರ ಬಂತು. ಹೀಗಾಗಿ ಈಗ ಬಹಳ ಎಚ್ಚರಿಕೆಯಿಂದ ಇದ್ದೀನಿ. ಅದಕ್ಕಾಗಿ ನಾನು ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)