ಶಾಸಕರ ಮಾರಾಮಾರಿ ಪ್ರಕರಣಕ್ಕೆ ಸಿದ್ದರಾಮಯ್ಯ, ಡಿಕೆಶಿಯೇ ಕಾರಣ: ಜನಾರ್ದನ ರೆಡ್ಡಿ

ಬೆಂಗಳೂರು: ಈಗಲ್ಟನ್ ರೆಸಾರ್ಟ್​ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣಕ್ಕೆ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್​ ಅವರೇ ಕಾರಣ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ವಿಜಯನಗರ ಶಾಸಕ ಆನಂದ್​ ಸಿಂಗ್​ರನ್ನು ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಪ್ಲಿ ಶಾಸಕ ಗಣೇಶ್​ರನ್ನು ಆದಷ್ಟು ಬೇಗ ಬಂಧಿಸದಿದ್ದರೆ ಸರ್ಕಾರದ ಗೌರವ ಉಳಿಯಲ್ಲ ಎಂದು ಹೇಳಿದರು.

ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ವೈಷಮ್ಯಕ್ಕೆ ಶಾಸಕರು ಬಲಿಯಾಗುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ ಎರಡು ಗುಂಪುಗಳಾಗಿವೆ. ಇದರೊಂದಿಗೆ ಬಳ್ಳಾರಿ ಶಾಸಕರ ಒಗಟ್ಟನ್ನು ಒಡೆಯುತ್ತಿದ್ದಾರೆ. ಬಿಎಸ್​ವೈ ಸಿಎಂ ಆಗಿ, ನಾನು ಸಚಿವನಾಗಿದ್ದಾಗ ಬಳ್ಳಾರಿಯಲ್ಲಿ ಶಾಂತಿ ವಾತಾವರಣ ಇತ್ತು. ಇಂದು ಆ ವಾತವರಣವನ್ನು ಕಾಂಗ್ರೆಸ್​ ಕದಡುತ್ತಿದೆ ಎಂದು ಆರೋಪಿಸಿದರು.

ಆನಂದ್​ ಸಿಂಗ್​ ಅವರು ಅಷ್ಟೊಂದು ನೋವುಪಡುತ್ತಿದ್ದರೂ ಏನೂ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಬಿರಿಯಾನಿ ತಿಂದರೂ ಅಂತಾ ಸಚಿವ ಜಮೀರ್ ಹೇಳುತ್ತಾರೆ.​ ಇದು ಸರ್ಕಾರ ಮತ್ತು ಶಾಸಕರಿಗೆ ಶೋಭೆ ತರುವಂಥದ್ದಲ್ಲ ಎಂದು ಟೀಕಿಸಿದರು.

ಆನಂದ್​ ಸಿಂಗ್​ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಅಲ್ಲದೇ ಒಂದು ಬಾರಿ ಸಚಿವರಾಗಿದ್ದವರು. ಅವರ ಘನತೆ, ವಯಸ್ಸು ಹಾಗೂ ಅನುಭವ ಮರೆತು ಯುವ ಶಾಸಕ ಗಣೇಶ್​ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಆದಷ್ಟು ಬೇಗ ಅವರ ಬಂಧನವಾಗಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಆಪರೇಷನ್ ಕಮಲಕ್ಕಾಗಿಯೇ ಜಗಳ ನಡದಿದೆ ಎನ್ನುವುದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)