ಜಾತ್ಯತೀತರಿಗೆ ರಕ್ತದ ಪರಿಚಯ ಇಲ್ಲ ಎಂದರೆ ಅದು ನಿಮ್ಮ ತಂದೆಗೇ ಮಾಡಿದ ಅಪಮಾನ: ಅನಂತ್​ಗೆ ಸಿದ್ದು ಟ್ವೀಟ್​ ತಿವಿತ

ಬೆಂಗಳೂರು: ಜಾತ್ಯತೀತ ತತ್ತ್ವ ಪ್ರತಿಪಾದಿಸುವವರಿಗೆ ಅವರ ಅಪ್ಪ-ಅಮ್ಮನ ರಕ್ತದ ಪರಿಚಯವಿರುವುದಿಲ್ಲ ಎಂಬ ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅನಂತ್​ಕುಮಾರ್​ ಹೆಗಡೆ ಅವರು, ನಮ್ಮ ತಂದೆ ಕಟ್ಟಾ ಕಾಂಗ್ರೆಸಿಗ. ಬಿಜೆಪಿಯಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿದಾಗ ನನಗೆ ಬೈದಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವಂತೆ ನನಗೆ ಹೇಳಿದ್ದರು. ಐದು ಬಾರಿ ಚುನಾವಣೆಗೆ ನಿಂತಾಗಲೂ ಅವರು ನನಗೆ ಮತ ಹಾಕಿದ್ದಾರೆ ಎಂದು ನಾನು ನಂಬಿಲ್ಲ. ಆದರೆ, ಈ ಬಾರಿ ಅವರು ಮೋದಿಯನ್ನು ನೋಡಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದಾರೆ,” ಎಂದಿದ್ದರು. ಆ ಮೂಲಕ ತಮ್ಮ ತಂದೆ ಕಟ್ಟಾ ಕಾಂಗ್ರೆಸ್​ವಾದಿ ಎಂಬುದನ್ನು ಬಹಿರಂಗಪಡಿಸಿದ್ದರು.

ಇದೇ ವಿಚಾರವನ್ನಿಟ್ಟುಕೊಂಡು ಇಂದು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ,” ಕಾಂಗ್ರೆಸ್​ ಒಂದು ಜಾತ್ಯತೀತ ಪಕ್ಷ. ಕಾಂಗ್ರೆಸ್​ಗೆ ಮತ ನೀಡುವವರೂ ಪರೋಕ್ಷವಾಗಿ ಜಾತ್ಯತೀತ ವಾದಿಗಳೇ. ಹಿಂದೊಮ್ಮೆ ಅನಂತ್​ ಕುಮಾರ್​ ಹೆಗಡೆ ಜಾತ್ಯತೀತರಿಗೆ ಅಪ್ಪ – ಅಮ್ಮನ ರಕ್ತದ ಪರಿಚಯವಿಲ್ಲ ಎಂದು ಹೇಳಿದ್ದರು. ಅಂದು ಅನಂತ್​ ಕುಮಾರ್​ ಅಪಮಾನಿಸಿದ್ದು ಜಾತ್ಯತೀತರನ್ನು ಮಾತ್ರವಲ್ಲದೇ ಅವರ ತಂದೆಯನ್ನೂ ಕೂಡ,” ಎಂದು ಸಿದ್ದರಾಮಯ್ಯ ಟ್ವಿಟರ್​ ಮೂಲಕ ತಿವಿದಿದ್ದಾರೆ.