ಲೆಕ್ಕಕ್ಕೆ ಸಿಗುತ್ತಿಲ್ಲ 35,000 ಕೋಟಿ ರೂ.!

ಬೆಂಗಳೂರು: ಹಿಂದಿನ ಸರ್ಕಾರದಲ್ಲಿ ಶಾಲಾ ಸಮವಸ್ತ್ರ, ಲ್ಯಾಪ್​ಟಾಪ್ ಖರೀದಿ ಮತ್ತಿತರ ವ್ಯವಹಾರಗಳಲ್ಲಿ ಕೋಟಿ ಕೋಟಿ ಲೂಟಿಯಾಗಿದೆ. 2016-17ರ ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂ.ಗೆ ಲೆಕ್ಕ ಸಿಗುತ್ತಿಲ್ಲ. ಈ ಕುರಿತು ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ. ‘ಸಿಎಜಿ ವರದಿಭ್ರಷ್ಟ ಸರ್ಕಾರದ ಲೂಟಿ’ ಎಂಬ 36 ಪುಟಗಳ ಕಿರುಪುಸಕ್ತವನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಡಾ.ಅಶ್ವತ್ಥ ನಾರಾಯಣ್ ಹಾಗೂ ರಾಜ್ಯ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ರವಿಕುಮಾರ್, ಸಿಎಜಿ ವರದಿ ಮೂಲಕ 2ಜಿ, ಕಾಮನ್ ವೆಲ್ತ್ ಹಗರಣ ಬಯಲಿಗೆ ಬಂದಿವೆ. ಅದೇ ರೀತಿ ಸಿದ್ದರಾಮಯ್ಯ ಅವಧಿಯ ಸಾವಿರಾರು ಕೋಟಿ ಅಕ್ರಮ ಕೂಡ ಸಿಎಜಿಯಿಂದ ಬಹಿರಂಗಗೊಂಡಿದೆ ಎಂದರು.

1. 72 ಕೋಟಿ ಶಾಲಾ ಸಮವಸ್ತ್ರ ಖರೀದಿಯಲ್ಲಿ ಅಕ್ರಮ ನಡೆದಿದೆ, ಲ್ಯಾಪ್​ಟಾಪ್ ಖರೀದಿಗೆ ಮೀಸಲಿಟ್ಟ 115.10 ಕೋಟಿ ರೂ. ಅನ್ನು 1 ವರ್ಷ ಬ್ಯಾಂಕ್​ನಲ್ಲಿಡಲಾಗಿದೆ, 7,378 ಕೋಟಿ ರೂ. ಕಾಮಗಾರಿಗೆ ಸಂಪುಟದ ಅನುಮೋದನೆ ಇಲ್ಲದೆ ಟೆಂಡರ್ ಕರೆಯಲಾಗಿದೆ. 254.34 ಕೋಟಿ ರೂ.ಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ. ಕುಡಿಯುವ ನೀರಿಗೆ ಮೀಸಲಿಟ್ಟ 612 ಕೋಟಿ ರೂ.ಗೆ ಬಡ್ಡಿ ಪಡೆಯಲಾಗಿದೆ. ಖರ್ಚಾಗದೆ ಉಳಿದಿರುವ ಹಣದ ಲೆಕ್ಕ ಎಲ್ಲಿ? ಈ ಹಣ ಎಲ್ಲಿ ಹೋಗಿದೆ ಎಂದು ಅವರು ಪ್ರಶ್ನಿಸಿದರು.

2017-18ರ ಸಿಎಜಿ ವರದಿ ಉಲ್ಲೇಖಿಸಿದ ಅಕ್ರಮಗಳನ್ನು ಸಿಎಂ ಕುಮಾರಸ್ವಾಮಿ ಮುಚ್ಚಿಟ್ಟಿದ್ದಾರೆ. ಬಳಕೆಯಾಗದ 11,994.81 ಕೋಟಿ ರೂ. ಎಲ್ಲಿ ಹೋಗಿದೆ ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರ 290.98 ಕೋಟಿ ರೂ. ನೀಡಿದೆ. ಆದರೆ ಸಿದ್ದರಾಮಯ್ಯ ಸರ್ಕಾರ 222.48 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಕಾವೇರಿ ನಿಗಮ ಸಂಸ್ಥೆ ಮೂಲಕ ಕುಡಿಯುವ ನೀರು ಕೆರೆ ಭರ್ತಿ ಮಾಡಲು 6,884.54 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ರಾಜ್ಯದ 788 ಕೆರೆಗಳಿಗೆ ನೀರನ್ನೇ ತುಂಬಿಲ್ಲ. ಹಾಗಾಗಿ ಖರ್ಚಾಗದ 1,433.41 ಕೋಟಿ ರೂ. ಯಾರ ಜೇಬಿಗೆ ತುಂಬಿದೆ ಎಂದು ಅವರು ಪ್ರಶ್ನಿಸಿದರು. ಈ ಎಲ್ಲ ಅವ್ಯವಹಾರದಿಂದ ಹಿಂದಿನ ಸಿದ್ದರಾಮಯ್ಯ ಸರ್ಕಾರ ಶೇ.10ರ ಸರ್ಕಾರ ಎನ್ನುವುದು ಹಾಗೂ ಪ್ರಧಾನಿ ಮೋದಿ ಅವರು ‘10 ಪರ್ಸೆಂಟ್ ಸರ್ಕಾರ ಮತ್ತು ಸೀದಾ ರೂಪಯ್ಯ ಸರ್ಕಾರ’ ಅಂತ ಆರೋಪ ಮಾಡಿದ್ದು ಸಾಬೀತಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಬಿಡುಗಡೆ ಮಾಡಿರುವ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ, ನಮ್ಮಲ್ಲಿ ಯಾರೂ ಜೈಲಿಗೆ ಹೋಗಿಲ್ಲ. ಯಾವುದೇ ಅಕ್ರಮ ಮಾಡಿಲ್ಲ.

| ಸಿದ್ದರಾಮಯ್ಯ ಮಾಜಿ ಸಿಎಂ

ದೊಡ್ಡ ಪವಾಡವೇ ನಡೆದಿದೆ ಕೇವಲ 6 ಸಿಬ್ಬಂದಿಗೆ 5,500 ಚ.ಅಡಿಯ ಕಟ್ಟಡಕ್ಕೆ 1.28 ಕೋಟಿ ರೂ. ವಿವೇಚನಾ ರಹಿತ ವೆಚ್ಚ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಬೇಕಾದವರಿಗೆ ಬೇಕಾಬಿಟ್ಟಿ ಟೆಂಡರ್ ನೀಡಿ ಭ್ರಷ್ಟಾಚಾರ ಎಸಗಲಾಗಿದೆ. ಅರ್ಕಾವತಿ ನದಿ ಪುನಃಶ್ಚೇತನದಲ್ಲಿ ಅಕ್ರಮ ನಡೆದಿದೆ. ವಸತಿ ಇಲಾಖೆಯಲ್ಲಿ 40 ಲೀ. ಡಿಸೇಲ್ ಬೆಲೆ 1,944 ರೂ. ಇದ್ದರೂ 21,944 ರೂ. ಪಾವತಿಸ ಲಾಗಿದೆ. ರಸ್ತೆ ಕಾಮಗಾರಿ ವಿಳಂಬದಲ್ಲಿ ಖರ್ಚು ಹೆಚ್ಚಿದೆ. ಭ್ರಷ್ಟಾಚಾರದಲ್ಲಿ ದೊಡ್ಡ ಪವಾಡವೇ ನಡೆದಿದೆ. ವಿವಿಧ ಇಲಾಖೆಗಳ ರಶೀದಿ ಮತ್ತು ಖರ್ಚಿಗೆ ತಾಳೆ ಆಗುತ್ತಿಲ್ಲ ಎಂದು ಬಿಜೆಪಿ ನಾಯಕರು ದೂರಿದರು.

ಡಿ.ಕೆ.ಶಿವಕುಮಾರ್ ಉತ್ತರಿಸಲಿ

ಆಗಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಲಾಖೆ ಯಲ್ಲಿ ಕಾಮಗಾರಿ ಮೇಲ್ವಿಚಾರಣೆ ಕೊರತೆಯಿಂದ ನಿರಂತರ ಜ್ಯೋತಿ ಯೋಜನೆಯಲ್ಲಿ 1.17 ಕೋಟಿ ರೂ. ನಷ್ಟವಾಗಿದೆ. ಈ ಕುರಿತು ಡಿಕೆಶಿ ರಾಜ್ಯದ ಜನರಿಗೆ ಉತ್ತರಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದರು.

ಆರೋಗ್ಯ ಇಲಾಖೆಯಲ್ಲಿ 535.22 ಕೋ.ರೂ. ಹಗರಣ ನಡೆದಿದೆ. ಶೇ.52 ಔಷಧಗಳನ್ನು ಪರೀಕ್ಷೆ ನಡೆಸದೆ ವಿತರಿಸಲಾಗಿದೆ. ಸ್ಪೀಕರ್ ರಮೇಶ್​ಕುಮಾರ್ ನಮ್ಮ ದೊಡ್ಡಮ್ಮನ ಮಗನಲ್ಲ, ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು.

| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ