More

    ಕಾಂಗ್ರೆಸ್ ನಾಯಕತ್ವ| ಅಡಿಗಡಿಗೂ ಸಿದ್ದುಗೆ ಅಡೆತಡೆ

    ಬೆಂಗಳೂರು: ಮುಂದಿನ ಸಾರ್ವತ್ರಿಕ ಚುನಾವಣೆಯ ನಾಯಕತ್ವ ತಮ್ಮದೇ ಆಗಿರಬೇಕು ಮತ್ತು ಪಕ್ಷ ಬಹುಮತದ ಗೆರೆ ಮುಟ್ಟಿದರೆ ತಾವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದೆಂಬ ಅಂದಾಜಿನಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಪಕ್ಷದೊಳಗೆ ಆಂತರಿಕ ಪ್ರತಿರೋಧ ಹೆಚ್ಚಾಗುತ್ತಿದೆ.

    ನಮ್ಮ ಜತೆ ಸಿದ್ದರಾಮಯ್ಯ ಅವರೂ ಒಬ್ಬರಾಗಿರಲಿ, ಸಿದ್ದರಾಮಯ್ಯರದ್ದೇ ನಾಯಕತ್ವ ಬೇಡ ಎಂಬ ದನಿಯನ್ನು ಹೆಚ್ಚಿಸುತ್ತಿರುವ ಪಕ್ಷದ ಇತರ ನಾಯಕರು, ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್​ಗೆ ತೀರ್ವನಿಸಲು ಸಾಧ್ಯವಾಗಿಲ್ಲ.

    ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಶ್ನಾತೀತ ನಾಯಕ. ಅದರಲ್ಲೂ ಕುರುಬ ಸಮಾಜಕ್ಕೆ ಅವರೇ ಅಧಿನಾಯಕ. ಹೀಗಿರುವಾಗ ಅವರನ್ನು ಪೂರ್ಣವಾಗಿ ಕಡೆಗಣಿಸುವ ಅವಕಾಶವಿಲ್ಲವೆಂದರಿತ ಪಕ್ಷದ ಹಿರಿಯ ನಾಯಕರು ಅವರನ್ನೂ ಒಳಗೊಂಡಂತೆ ಹೊಸ ನಾಯಕತ್ವ ಸಮೀಕರಣವನ್ನು ಹೈಕಮಾಂಡ್ ಮುಂದೆ ಬಲವಾಗಿ ಮಂಡಿಸಿದ್ದಾರೆ.

    ಪಕ್ಷದ ಹಿಡಿತ ತಮ್ಮಲ್ಲೇ ಉಳಿಯಬೇಕೆಂಬ ನಿಟ್ಟಿನಲ್ಲಿ ತಮ್ಮೊಂದಿಗೆ ಗುರುತಿಸಿಕೊಂಡ ಎಂ.ಬಿ.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದ್ದರು. 4 ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಿ ಜಾತಿ ಆಧಾರದಲ್ಲಿ ಹೊಸ ನಾಯಕತ್ವ ಬೆಳೆಸುವ ಪ್ರಸ್ತಾವನ್ನು ಎಐಸಿಸಿ ಮುಂದೆ ಮಂಡಿಸಿದ್ದರೆನ್ನಲಾಗಿದೆ. ಜತೆಗೆ ಪ್ರತಿಪಕ್ಷ ಸ್ಥಾನದ ಬಲ ಕುಗ್ಗಬಾರದೆಂಬ ಉದ್ದೇಶದಿಂದಲೇ ಪ್ರತಿಪಕ್ಷ ನಾಯಕ- ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಿಸಬಾರದೆಂದು ನೇರವಾಗಿಯೇ

    ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದರು. ಇಷ್ಟರ ನಡುವೆ ಇವರ ಎದುರಾಳಿಯಾಗಿ ಕಾಣಿಸಿಕೊಂಡಿರುವ ಹಿರಿಯ ನಾಯಕರೆಲ್ಲ ಸಾರಾಸಗಟಾಗಿ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ವಿರುದ್ಧವಾದ ಅಭಿಪ್ರಾಯ ಮಂಡಿಸಿದ್ದಾರೆ. ಈ ಸಂಗತಿಯನ್ನು ದೆಹಲಿ ನಾಯಕರಿಗೆ ತಿಳಿಸಿ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ.

    ಮಹಾರಾಷ್ಟ್ರ ಮಾದರಿಯಲ್ಲಿ ಪ್ರತಿಪಕ್ಷ ನಾಯಕ- ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಿಸಿ ಎಂದು ಹೈಕಮಾಂಡ್​ಗೆ ಸಲಹೆ ನೀಡಿದ್ದಾರೆ. ಈ ಅಭಿಪ್ರಾಯಕ್ಕೆ ಮಾನ್ಯತೆ ಸಿಕ್ಕಿರೆ ಸಿದ್ದರಾಮಯ್ಯರನ್ನು ಪಕ್ಷದ ಚಟುವಟಿಕೆಯಿಂದ ದೂರ ಇಡá-ವ ಲೆಕ್ಕಾಚಾರ ಅಡಗಿದೆ. ಕಾರ್ಯಾಧ್ಯಕ್ಷ ಸ್ಥಾನ ಹೆಚ್ಚು ಸೃಷ್ಟಿಸದಿದ್ದರೆ ಸಿದ್ದರಾಮಯ್ಯ ಬಳಗದವರು ಪಕ್ಷದ ಕೋರ್ ತಂಡದೊಳಗೆ ಬಾರದಂತೆ ತಡೆಯಬಹುದು ಎಂಬ ರಾಜಕೀಯ ಗುಣಾಕಾರ ಅಡಗಿದೆ. ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಪ್ರಸ್ತಾಪಿಸಿರುವ ಹೆಸರಿನ ಬದಲು ಬೇರೆಯವರನ್ನು ಆರಿಸಲೇಬೇಕೆಂದು ಸಾಧ್ಯವಾದಷ್ಟು ಒತ್ತಡ ತಂದಿದ್ದಾರೆ. ಈ ಬೆಳವಣಿಗೆ ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿದೆ.

    ಪಕ್ಷಕ್ಕೆ ದುಡಿದವರು ಇದ್ದಾರೆ

    ಸಿದ್ದರಾಮಯ್ಯ ಅವರಿಗೆ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ, ಪ್ರತಿಪಕ್ಷ ನಾಯಕ… ಹೀಗೆ 2013ರಿಂದ ಅವಕಾಶ ಕೊಡುತ್ತಲೇ ಬರಲಾಗಿದೆ. ಪಕ್ಷಕ್ಕೆ ದುಡಿದ ಬಹಳಷ್ಟು ಮಂದಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕೆಂದರೆ ನಮ್ಮ ಮನವಿ ಆಲಿಸಿ ಎಂದು ಹಿರಿಯರು ಪರಿಪರಿಯಾಗಿ ಕೇಳಿಕೊಂಡಿರುವುದು ಪಕ್ಷದ ದೆಹಲಿ ನಾಯಕರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೂಲಕವಾಗಿ ತಮ್ಮ ಆಶಯವನ್ನು ಹೈಕಮಾಂಡ್ ಮೂಲಕ ಈಡೇರಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸಿದರೆ, ಇತರರು ತಮ್ಮದೇ ಹಳೆಯ ದಾರಿಯಲ್ಲಿ ಹೊರಟಿದ್ದಾರೆ.

    ಕಾರ್ಯಾಧ್ಯಕ್ಷರ ನೇಮಕಾತಿ ಸಂಬಂಧ ಪರಮೇಶ್ವರ್ ಬರೆದಿರುವ ಪತ್ರದ ಬಗ್ಗೆ ಮಾತನಾಡಲಾರೆ. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡದಂತೆ ನಾಯಕರಲ್ಲಿ ವಿನಂತಿಸುವೆ. ನೇಮಕಾತಿ ಕುರಿತು ಸೂಕ್ತ ಕಾಲಕ್ಕೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಆಗದಿರುವ ಬಗ್ಗೆ ಚರ್ಚೆ ಆಗಬೇಕು.

    | ಕೆ.ಸಿ.ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ

    | ಶ್ರೀಕಾಂತ್ ಶೇಷಾದ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts