ಮೋದಿ ಮುಖ ನೋಡಿ ವಾರಾಣಸಿ ಜನ ಮತ ಹಾಕ್ತಾರೆ, ನನ್ನ ಮುಖ ನೋಡಿ ನೀವು ಮತ ಹಾಕಿ!

ಬಾಗಲಕೋಟೆ: ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆ ಮುಕ್ತಾಯವಾಗಿದ್ದು, ಅವಧಿ‌ ಮುಕ್ತಾಯವಾಗುತ್ತಿದ್ದಂತೆ ಎಚ್ಚೆತ್ತು ತಮ್ಮ ಭಾಷಣ ಮುಕ್ತಾಯ ಮಾಡಿದ್ದಾರೆ.

ತಮ್ಮ ಬಾದಾಮಿ ಕ್ಷೇತ್ರದ ಕೆರೂರ ಪಟ್ಟಣದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯ, ಕೆರೂರಿನಲ್ಲಿ ಈ ಚುನಾವಣೆಯ ಕೊನೆ ಭಾಷಣ ಇದು. ಬಾದಾಮಿ ನನಗೆ ಮರುಜೀವ ಕೊಟ್ಟ ಕ್ಷೇತ್ರ. ಬಾದಾಮಿ‌ ಜನ ನನ್ನ ಕೈ ಹಿಡಿದರು. ಅವರ ಋಣ ನನ್ನ‌ ಮೇಲೆ ಬಹಳ ಇದೆ. ನಿಮ್ಮ ಋಣ ತೀರಿಸುವ ವಿಶ್ವಾಸ ನನಗಿದೆ. ಮೋದಿ ಮುಖ ನೋಡಿ ವಾರಣಾಸಿ ಜನರು ವೋಟು ಹಾಕುತ್ತಾರೆ. ಬಾಗಲಕೋಟೆ ಜನರು ಮೋದಿ ಮುಖ ನೋಡಿ ಯಾಕೆ ವೋಟು ಹಾಕುತ್ತಾರೆ. ನಾನು ಬಾದಾಮಿ ಶಾಸಕ ನನ್ನ ಮುಖ ನೋಡಿ ಇಲ್ಲಿನ ಜನರು ಕಾಂಗ್ರೆಸ್ ಅಭ್ಯರ್ಥಿಗೆ ವೋಟು ಹಾಕಿ ಎಂದು ಹೇಳಿದರು.

ನಾನು ಬಾದಾಮಿ ಶಾಸಕನಾಗಿ ಒಂದು ವರ್ಷ ಆಯ್ತು. ನಾನು ಕ್ಷೇತ್ರಕ್ಕೆ ಏನೇನು ಮಾಡಿದ್ದೇನೆ ಎಂದು ಕೊಟ್ಟಿರುವ ಪಟ್ಟಿ ನೂರಕ್ಕೆ ನೂರು ಸತ್ಯ. ಕುಡಿಯುವ ನೀರು, ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೊಡಿಸಿದ್ದೇನೆ. ನೀವು ವೀಣಾ ಕಾಶಪ್ಪನವರ್‌ಗೆ ವೋಟು ಹಾಕಿದರೆ ಅದು ನನಗೆ ಓಟು ಹಾಕಿದಂಗೆ ಎಂದರು.

ಬಾದಾಮಿ ಕ್ಷೇತ್ರದಲ್ಲಿ ವೀಣಾಗೆ 25 ಸಾವಿರ ವೋಟು ಲೀಡ್ ಕೊಡಬೇಕು. ಐವತ್ತು ಸಾವಿರ ಲೀಡ್ ಕೊಟ್ಟರೆ ನಿಮಗೆ ಕೋಟಿ ಕೋಟಿ ನಮಸ್ಕಾರ ಎಂದು ತಾವು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯ ಯೋಜನೆಗಳನ್ನು ನೆನಪಿಸಿದರು. (ದಿಗ್ವಿಜಯ ನ್ಯೂಸ್)