ಕುಟುಂಬ ರಾಜಕಾರಣ ಮೈತ್ರಿ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ದೆಹಲಿ/ಬೆಂಗಳೂರು: ಕುಟುಂಬ ರಾಜಕಾರಣ ಮೈತ್ರಿ ಸರ್ಕಾರದ ಮೇಲೆ ಯಾವುದೇ ದುಷ್ಪರಿಣಾಮ ಬೀರಲ್ಲ. ಮಂಡ್ಯದಲ್ಲಿ ನಿಖಿಲ್ ಹಾಗೂ ಹಾಸನದಲ್ಲಿ ಪ್ರಜ್ವಲ್ ನಿಲ್ಲಿಸುವುದು ಜೆಡಿಎಸ್ ನಿರ್ಧಾರ ಎಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಿರುವ ಹಲವು ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಕಾಂಗ್ರೆಸ್​ನ ಹಾಲಿ ಸಂಸದರಿರುವ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಬಗ್ಗೆ ನಿರ್ಧಾರವಿಲ್ಲ. ಮೈಸೂರು ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಇಂದು ನಡೆಯುವ ಸಭೆಯಲ್ಲಿ ನನ್ನ ನಿರ್ಧಾರ ಹೇಳುತ್ತೇನೆ ಎಂದ ಅವರು, ಮಂಜು ಬಿಜೆಪಿಗೆ ಹೋಗಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರು ಕೂಡ ಸುಮಲತಾ ಹಿಂದೆ ಇಲ್ಲ
ಸುಮಲತಾ ಅವರು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲ್ಲ. ಯಾವ ಕಾಂಗ್ರೆಸ್ ನಾಯಕರೂ ಕೂಡ ಸುಮಲತಾ ಹಿಂದೆ ಇಲ್ಲ. ಡಿ.ಕೆ. ಶಿವಕುಮಾರ್ ಅವರು ಮಂಡ್ಯ ನಾಯಕರ ಸಭೆ ಕರೆದಿದ್ದು, ನಾಯಕರು ಸಭೆಗೆ ಹೋಗದೆ ಇದ್ದುದರ ಬಗ್ಗೆ ನನಗೆ ಗೊತ್ತಿಲ್ಲ. ಜೆಡಿಎಸ್​ಗೆ ಬಿಟ್ಟ ಕ್ಷೇತ್ರದಲ್ಲಿ ಇಂತವರನ್ನೇ ಅಭ್ಯರ್ಥಿ ಹಾಕಿ ಎಂದು ನಾವು ಹೇಳೋಕೆ ಆಗಲ್ಲ. ಹಾಗೆಯೇ ಅಭ್ಯರ್ಥಿಗಳ‌ ಆಯ್ಕೆ ವಿಚಾರದಲ್ಲಿ ಜೆಡಿಎಸ್​ನವರು ನಮಗೆ ಹೇಳೋಕೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನು ಸುಮಾಲತಾರನ್ನು ಬೆಂಬಲಿಸುತ್ತಿಲ್ಲ
ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಇಂದು ನಡೆಯುವ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಲಿದೆ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ ಎಂದು ಹೇಳಿದವನೇ ನಾನು. ನಾನು ಹೇಗೆ ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ಸುಮಲತಾ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು.

ದೆಹಲಿ ಕದ ತಟ್ಟಿದ ಕಾಂಗ್ರೆಸ್​​ ಟಿಕೆಟ್ ಆಕಾಂಕ್ಷಿಗಳು
ದೆಹಲಿಯಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಗೆ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ದೌಡಾಯಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಕೇಂದ್ರದ ಟಿಕೆಟ್​ಗಾಗಿ ರೋಷನ್ ಬೇಗ್​, ಹುಬ್ಬಳ್ಳಿ ಕ್ಷೇತ್ರಕ್ಕಾಗಿ ಶಾಕಿರ್ ಸನದಿ, ಚಿತ್ರದುರ್ಗಕ್ಕೆ ಶಿವಮೂರ್ತಿ ನಾಯಕ ಹಾಗೂ ಬಾಗಲಕೋಟೆ ಕ್ಷೇತ್ರಕ್ಕಾಗಿ ವೀಣಾ ಕಾಶಪ್ಪನವರ್ ಲಾಬಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಕೋರಿಕೆ ನೀಡಿದ್ದಾರೆನ್ನಲಾಗಿದೆ. (ದಿಗ್ವಿಜಯ ನ್ಯೂಸ್​)