ಎಚ್​ಡಿಕೆ ಈ ಹಿಂದೆ ಟಿಪ್ಪು ಜಯಂತಿ ವಿರೋಧಿಸಿದ್ದು ನನಗೆ ಗೊತ್ತಿಲ್ಲ: ಮಾಜಿ ಸಿಎಂ ಸಿದ್ದು

ಹುಬ್ಬಳ್ಳಿ: ಉಪ ಚುನಾವಣೆಗಳ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೇ ಗೆಲ್ಲುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಮಖಂಡಿ, ಬಳ್ಳಾರಿ, ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಸುಲಭವಾಗಿ ಜಯಗಳಿಸುತ್ತೇವೆ. ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಹಳ ಫೈಟ್‌ ಇದೆ ನೋಡೋಣ. ಈ ಫಲಿತಾಂಶ 2019ರ ಲೋಕಸಭಾ ಚುನಾವಣೆ ಮತ್ತು ನರೇಂದ್ರ ಮೋದಿ ಸರ್ಕಾರದ ಸಣ್ಣ ಪ್ರಮಾಣದ ಜನಾಭಿಪ್ರಾಯ ವ್ಯಕ್ತವಾಗಲಿದೆ ಎಂದು ಹೇಳಿದರು.

ನವೆಂಬರ್‌ನಲ್ಲಿ ರೈತರಿಗೆ ಋಣಮುಕ್ತ ಪತ್ರ ನೀಡುವುದಾಗಿ ಹೇಳಿದ್ದಾರೆ. ರೈತರ ಸಾಲಮನ್ನಾ ವಿಷಯವಾಗಿ ಸಿಎಂ ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ. ಬಿ.ಎಸ್. ಯಡಿಯೂರಪ್ಪನವರಿಗೆ ವಿಧಾನ ಸೌಧದ ಮೂರನೇ ಮಹಡಿ ಕನಸು ಬೀಳುತ್ತದೆ. ಆದರೆ ಸರ್ಕಾರ ಏನೂ ಆಗುವುದಿಲ್ಲ ಎಂದರು.

ಈ ಹಿಂದೆ ಟಿಪ್ಪು ಜಯಂತಿ ವಿರೋಧಿಸಿದ್ದ ಸಿಎಂ ಕುಮಾರಸ್ವಾಮಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮೂರು ವರ್ಷಗಳಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಸರ್ಕಾರ ಕೂಡಾ ಟಿಪ್ಪು ಜಯಂತಿ ಆಚರಿಸಲು ನಿರ್ಧಾರ ಮಾಡಿದೆ. ದೀಪಾವಳಿ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)