ಅತೃಪ್ತ ಶಾಸಕರ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಎರಡೆರಡು ಬಾರಿ ಶೋಕಾಸ್ ನೋಟಿಸ್, ವಿಪ್​ಗಳನ್ನು ಜಾರಿ ಮಾಡಿದ್ದರೂ ಕೂಡ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ.ನಾಗೇಂದ್ರ ಹಾಗೂ ಡಾ. ಉಮೇಶ್ ಜಾಧವ್ ಅವರು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ.

ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅತೃಪ್ತರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದಾರೆ.

ಏನಾಗಬಹುದು?

ಇನ್ನು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮೊದಲೇ ಅತೃಪ್ತ ಶಾಸಕರ ವಿರುದ್ಧ ದೂರು ಅಂಗೀಕಾರವಾದರೆ ಅವರ ಶಾಸಕತ್ವ ರದ್ದು ಮಾಡಬಹುದು. ಪಕ್ಷಾಂತರ ನಿಷೇಧ ಕಾಯಿದೆ ಅಡಿಯಲ್ಲಿ ಕ್ರಮ ತೆಗೆದುಕೊಂಡರೆ ಮುಂದಿನ ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಅಕಸ್ಮಾತ್‌ ಸ್ಪೀಕರ್‌ ಕ್ರಮ ತೆಗೆದುಕೊಳ್ಳುವ ಮೊದಲೇ ಶಾಸಕ ಸ್ಥಾನಕ್ಕೆ ಶಾಸಕರು ರಾಜೀನಾಮೆ ನೀಡಿದೆ ಮಾತ್ರ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮದಿಂದ ಪಾರಾಗಬಹುದು.

ಸಮಯ ಕೇಳಿದ್ದ ಸಿದ್ದರಾಮಯ್ಯ

ಅತೃಪ್ತ ಶಾಸಕರ ವಿರುದ್ಧ ದೂರು ಸಲ್ಲಿಸಲು ಸಿದ್ದರಾಮಯ್ಯ ಅವರು ಸ್ಪೀಕರ್​ ಭೇಟಿಗೆ ಸಮಯ ಕೇಳಿದ್ದರು. ಮುಂಜಾನೆ 11 ಗಂಟೆಗೆ ಸ್ಪೀಕರ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲು ಸಮಯ ಕೇಳಿದ್ದರು. (ದಿಗ್ವಿಜಯ ನ್ಯೂಸ್)