ಸಿಎಂ ಗಾದಿಗೆ ಕೊನೇ ಆಟ: ಪಟ್ಟಕ್ಕಾಗಿ ಕೈಪಡೆ ಎದುರು ಎಚ್ಡಿಕೆ ಥಂಡಾ 

ರಾಷ್ಟ್ರದ ಜನತೆಯನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿರುವ ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದ ಭವಿಷ್ಯ ಬರೆಯುವ ಜತೆಗೆ ಕರ್ನಾಟಕದ ಮುಖ್ಯಮಂತ್ರಿ ವಿಷಯದಲ್ಲಿಯೂ ನಿರ್ಣಾಯಕವಾಗುವ ಸಾಧ್ಯತೆಯಿದೆ. ಒಂದೆಡೆ ಸಿಎಂ ಸ್ಥಾನ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿರುವ ಕುಮಾರಸ್ವಾಮಿ ಸಿಟ್ಟು, ಸೆಡವು ಬಿಟ್ಟು ಕಾಂಗ್ರೆಸ್​ನ ಅತೃಪ್ತರ ಮನವೊಲಿಕೆಗೆ ಮುಂದಾದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಲಿ ಎಂದು ಧ್ವನಿ ಎತ್ತರಿಸಿರುವ ಅವರ ಆಪ್ತರು ಎಚ್ಡಿಕೆಗೆ ಏಟಿನ ಮೇಲೆ ಏಟು ಕೊಡುತ್ತಲೇ ಇದ್ದಾರೆ. ದಲಿತ ನಾಯಕ ಖರ್ಗೆ ಸಿಎಂ ಆಗಬೇಕಿತ್ತೆಂದು ಕುಮಾರಸ್ವಾಮಿ ಕೊಟ್ಟ ಟಾಂಗ್​ಗೆ ಪ್ರತಿಯಾಗಿ, ಜೆಡಿಎಸ್​ನಲ್ಲಿ ರೇವಣ್ಣ ಅವರಿಗೂ ಸಿಎಂ ಆಗಲು ಅರ್ಹತೆ ಇದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೋಸ್ತಿ ಪಡೆಯೊಳಗಿನ ಈ ಬೆಳವಣಿಗೆ ಬೆನ್ನಲ್ಲೇ, ಬರದ ಸಮಾಲೋಚನೆ ಹೆಸರಲ್ಲಿ ಮೇ 21ರಂದು ಶಾಸಕರು, ಸಂಸದರ ಸಭೆ ಕರೆಯುವ ಮೂಲಕ ಬಿಜೆಪಿ ಅಂತಿಮ ಹಂತದ ಯುದ್ಧಕ್ಕೆ ಕಹಳೆ ಮೊಳಗಿಸಿದೆ.

ಬೆಂಗಳೂರು: ದೋಸ್ತಿ ಪಕ್ಷಗಳಲ್ಲಿ ‘ಮುಖ್ಯಮಂತ್ರಿ ಹುದ್ದೆ’ ಎಬ್ಬಿಸಿರುವ ಶೀತಮಾರುತದ ನಡುವೆಯೇ ಹಾಲಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಸ್ವಪಕ್ಷೀಯರೂ ಸೇರಿ ಕಾಂಗ್ರೆಸ್ ಶಾಸಕರ ವಿಶ್ವಾಸಗಳಿಸಲು ಮುಂದಾಗಿದ್ದಾರೆ. ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು’ ಎಂಬ ವಾದ ಕಾಂಗ್ರೆಸ್​ನಲ್ಲಿ ಪ್ರಬಲವಾಗುತ್ತಿದ್ದಂತೆ ಜೆಡಿಎಸ್ ಕಡೆಯಿಂದ ಅಷ್ಟೇ ತೀಕ್ಷ ್ಣ ಪ್ರತಿರೋಧ ವ್ಯಕ್ತವಾಗಿತ್ತು. ಬಳಿಕ ವಾತಾವರಣ ತಿಳಿಯಾಗುತ್ತಿದ್ದಂತೆ ಮತ್ತೆ ಹೊಸ ರೂಪದಲ್ಲಿ ಅದೇ ವಿಚಾರ ಮೈತ್ರಿಯ ನೆಮ್ಮದಿ ಕಸಿದಿದೆ.

ಈ ಸಂಗತಿ ಸಿದ್ದರಾಮಯ್ಯಗೆ ಸೀಮಿತವಾಗದೆ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ರೇವಣ್ಣವರೆಗೂ ವಿಸ್ತಾರ ವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ದೂರಾಲೋಚನೆ ಮಾಡಿರುವ ಕುಮಾರಸ್ವಾಮಿ ಮೇ 23ರಂದು ಲೋಕಸಮರ ಹಾಗೂ 2 ಉಪ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರ ಸಭೆ ಕರೆದು ಮನವೊಲಿಸಲು ತೀರ್ವನಿಸಿದ್ದಾರೆಂದು ತಿಳಿದು

ಬಂದಿದೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಮುಖ್ಯಮಂತ್ರಿ ಅಸಹಕಾರ ತೋರು ತ್ತಿದ್ದಾರೆಂದು ದನಿ ಎತ್ತುತ್ತಲೇ ಬಂದಿರುವ ಕಾಂಗ್ರೆಸ್ ಶಾಸಕರ ಒಂದು ಗುಂಪು ಮೈತ್ರಿ ಸರ್ಕಾರದ ವಾತಾವರಣ ಕದಡುತ್ತಲೇ ಇದೆ. ಅಷ್ಟೇ ಅಲ್ಲದೇ ತಮ್ಮ ಸಂಕಟವನ್ನು ಬಹಿರಂಗವಾಗಿ ಹೊರಹಾಕುವ ಮೂಲಕ ಸರ್ಕಾರಕ್ಕೆ ಮುಜುಗರವಾಗುವಂತೆ ಮಾಡುತ್ತಿದೆ.

ಈ ವಿಚಾರ ಹೈಕಮಾಂಡ್ ಮಟ್ಟಕ್ಕೂ ತಲುಪಿದ್ದು, ಅನುಸರಿಸಿಕೊಂಡು ಹೋಗುವಂತೆ ಸಿಎಂಗೆ ಸಲಹೆ ನೀಡಿದ್ದರು. ಜತೆಗೆ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ತನ್ನ ಶಾಸಕರಿಗೆ ಕೈ ಹೈಕಮಾಂಡ್ ತಿಳಿಹೇಳಿತ್ತು. ಇದೀಗ ಚುನಾವಣೆ ಮುಗಿದ್ದು, ಅಸಮಾಧಾನಿತ ಕಾಂಗ್ರೆಸ್ ಶಾಸಕರು ಎಲ್ಲಿ ತಮ್ಮ ಮೇಲೆ ಮುಗಿಬಿದ್ದಾರೋ ಅಥವಾ ಮೈತ್ರಿಗೆ ಅಪತ್ತು ಬರುವಂತೆ ಹೈಕಮಾಂಡ್ ಮೇಲೆ ಒತ್ತಡ ತಂದಾರೋ ಎಂಬ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿಯವರು ಮನವೊಲಿಕೆ ದಾರಿ ಹಿಡಿದಿದ್ದಾರೆ.

ಜೆಡಿಎಲ್​ಪಿ ಸಭೆ: ಈ ನಡುವೆ ಜೆಡಿಎಸ್ ಶಾಸಕರಲ್ಲಿಯೂ ಸಿಎಂ ಕೈಗೆ ಸಿಗುವುದಿಲ್ಲವೆಂಬ ಅಸಮಾಧಾನ ಇದ್ದೇ ಇದೆ. ಅಧಿಕಾರ ಹಂಚಿಕೆಯೂ ಆಗಿಲ್ಲ ಎಂಬ ನೋವಿದೆ. ಆದ್ದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ವಾದ ಮಾರನೇ ದಿನ ಅಂದರೆ ಮೇ 24 ಅಥವಾ 25ಕ್ಕೆ ಜೆಡಿಎಲ್​ಪಿ ಕರೆಯುವ ಬಗ್ಗೆ ದೇವೇಗೌಡರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಜೆಡಿಎಲ್​ಪಿಗೂ ಮುನ್ನವೇ ಸಮನ್ವಯ ಸಮಿತಿ ಸಭೆ ನಡೆಸುವ ಬಗ್ಗೆಯೂ 2 ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ.

ಶಾಸಕರ ದೂರೇನು

  • ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ
  • ವರ್ಗಾವಣೆ ಶಿಫಾರಸಿಗೆ ಮನ್ನಣೆ ನೀಡುತ್ತಿಲ್ಲ
  • ಮುಖ್ಯಮಂತ್ರಿ ಭೇಟಿ ಸಾಧ್ಯವಾಗುತ್ತಿಲ್ಲ
  • ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ
  • ನಿಗಮ ಮಂಡಳಿ ನೀಡಿದರೂ ನಿಯಂತ್ರಣ ಬೇರೆಯವರದು

ಹೈಕಮಾಂಡ್ ಯತ್ನ ವಿಫಲ

ಶಾಸಕರ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಎರಡು ಮೂರು ಬಾರಿ ಪ್ರಯತ್ನಿಸಿದ್ದ ವಿಚಾರವೂ ಈಗ ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಶಾಸಕರ ಸಭೆಗೆ ಮುಖ್ಯಮಂತ್ರಿಯವರನ್ನು ಕರೆಸಿ ಮಾತುಕತೆ ಮಾಡಿಸುವ ಆಶಯವಿತ್ತು. ಆದರೆ, ಕುಮಾರಸ್ವಾಮಿಯವರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೈ ಶಾಸಕರ ಔಪಚಾರಿಕ ಅಥವಾ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು. ಹೀಗಾಗಿ ಕಾಂಗ್ರೆಸ್ ನಾಯಕರ ಅಂತಿಮ ಪ್ರಯತ್ನವೂ ವಿಫಲಗೊಂಡಿತ್ತು. ಇದೀಗ ಸರ್ಕಾರ ಉಳಿಸಿಕೊಳ್ಳಬೇಕೆಂದರೆ ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಸುವುದು ಕುಮಾರಸ್ವಾಮಿಯವರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೈ ಶಾಸಕರ ಸಭೆ ನಡೆಸಲು ನಿರ್ಧರಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *