ಹಾಸನ: ‘ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಸಿಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಗೆಮಡುವಿನಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ. ಹಿಂದೆ ಬಾದಾಮಿಗೆ ಬನ್ನಿ ಎಂದು ನಾನೇ ಕರೆದಿದ್ದೆ. ಆದರೆ, ಅವರು ಇಲ್ಲೇ ಗೆಲ್ಲುವೆ ಎಂದು ಹೇಳಿದರು. ಕೊನೆಗೆ ಬಂದರು. ಮತ್ತೆ ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ಸಿದ್ದರಾಮಯ್ಯ ನೀವು ಈಗಾಗಲೇ ರಾಜ್ಯದ ಗದ್ದುಗೆ ಹಿಡಿದಿದ್ದೀರಿ. ಇನ್ಮುಂದೆ ನೀವು ದೆಹಲಿಯ ಗದ್ದುಗೆ ಹಿಡಿಯಿರಿ. ದೆಹಲಿ ಕಡೆ ನೋಡಿ ಎಂದು ಸೂಚಿಸಿದ್ದೇನೆ ಎಂದು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಆಗಲು ಕೋಡಿಶ್ರೀ ಸೂಚನೆ ನೀಡಿದ್ದಾರೆ.
ಹಾಲುಮತ ಸಮಾಜದವರು ಇಡೀ ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲಿ ನೆಲೆಸಿದ್ದಾರೆ. ನಾನು ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಹಂಬಳಿ ಹಳಸೀತು, ಸಿದ್ದು ಗದ್ದುಗೆ ಹಾಸೀತು ಎಂದು. ಆಗ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದರು ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯಗೆ ಶುಭಸೂಚನೆ ಇದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)