ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒಲಿಯಿತು ವಿಧಾನ ಸಭೆ ವಿಪಕ್ಷ ನಾಯಕನ ಸ್ಥಾನ; ಎಐಸಿಸಿ ಅಧಿಕೃತ ಆದೇಶ

ಬೆಂಗಳೂರು: ಬಹುದಿನಗಳಿಂದ ಕಗ್ಗಂಟಾಗಿದ್ದ ವಿಧಾನ ಸಭೆ ವಿಪಕ್ಷ ನಾಯಕನ ಸ್ಥಾನ ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಒಲಿದಿದೆ.

ಈ ಬಾರಿಯ ವಿಪಕ್ಷ ನಾಯಕನ ಸ್ಥಾನ ಪಡೆಯಲು ಕಾಂಗ್ರೆಸ್​ನಲ್ಲಿ ಪೈಪೋಟಿ ಹೆಚ್ಚಾಗಿತ್ತು. ಡಾ. ಜಿ.ಪರಮೇಶ್ವರ್ ಹಾಗೂ ಎಚ್​.ಕೆ.ಪಾಟೀಲ್​ ಹೆಸರು ಕೂಡ ಕೇಳಿಬಂದಿತ್ತು. ಆದರೆ ಇಂದು ಸಿದ್ದರಾಮಯ್ಯನವರನ್ನು ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.

ಹಾಗೇ ವಿಧಾನ ಪರಿಷತ್​ ವಿಪಕ್ಷ ನಾಯಕನ ಸ್ಥಾನಕ್ಕೆ ಎಸ್​.ಆರ್.ಪಾಟೀಲ್​ ಅವರನ್ನು ನೇಮಕ ಮಾಡಲಾಗಿದೆ.

ಅದರಲ್ಲೂ ಎಚ್​.ಕೆ.ಪಾಟೀಲ್​ ಮತ್ತು ಸಿದ್ದರಾಮಯ್ಯನವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೂಲ ಕಾಂಗ್ರೆಸ್ಸಿಗರಲ್ಲಿ ಬಹುತೇಕರು ಎಚ್​.ಕೆ.ಪಾಟೀಲ್​ ಅವರನ್ನು ಬೆಂಬಲಿಸಿದ್ದರು. ಆದರೆ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಸಿದ್ದರಾಮಯ್ಯನವರೇ ಸಮರ್ಥರು ಎಂದು ಇನ್ನೊಂದು ಬಣ ಹೇಳಿತ್ತು.

ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಮಧುಸೂದನ್ ಮಿಸ್ತ್ರಿ ಕೆಪಿಸಿಸಿ ಪ್ರಮುಖರು ಮತ್ತು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಈ ವೇಳೆ ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಜೆ.ಸಿ. ಚಂದ್ರಶೇಖರ್, ಡಾ. ರಂಗನಾಥ್ ಸೇರಿ ಬಹುತೇಕರು ಎಚ್.ಕೆ. ಪಾಟೀಲ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಉಳಿದವರು ಸಿದ್ದರಾಮಯ್ಯ ಪರ ಒಲವು ತೋರಿದ್ದರು. ಶಾಸಕರಲ್ಲಿ 50ಕ್ಕೂ ಹೆಚ್ಚು ಜನ ಸಹಿ ಮಾಡಿದ ಮನವಿಯನ್ನು ಮಿಸ್ತ್ರಿಗೆ ನೀಡಲಾಗಿತ್ತು.  ಈ ಬಗ್ಗೆ ಸಭೆ ನಡೆಸಿದ ಎಐಸಿಸಿ ಅಂತಿಮವಾಗಿ ಸಿದ್ದರಾಮಯ್ಯನವರನ್ನು ನೇಮಕ ಮಾಡಿದೆ.

ಸಿಎಲ್​ಪಿ ನಾಯಕನ ಸ್ಥಾನವನ್ನು ಪ್ರತ್ಯೇಕ ಮಾಡಲು ಎಐಸಿಸಿ ನಿರ್ಧಾರ ಮಾಡಿದ್ದು ಬೇರೆಯವರನ್ನು ಆಯ್ಕೆ ಮಾಡುವವರೆಗೂ ಸಿದ್ದರಾಮಯ್ಯನವರೇ ಆ ಸ್ಥಾನದಲ್ಲೂ ಮುಂದುವರಿಯಲಿದ್ದಾರೆ.

Leave a Reply

Your email address will not be published. Required fields are marked *