ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ, ಈ ಬಗೆಗಿನ ಚರ್ಚೆ ಅಪ್ರಸ್ತುತ: ಸಿದ್ದರಾಮಯ್ಯ ಸರಣಿ ಟ್ವೀಟ್

ಬೆಂಗಳೂರು: ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ವಾಕ್ಸಮರ ಶುರುವಾಗಿದೆ. ಟ್ವಿಟರ್​, ಹೇಳಿಕೆಗಳ ಮೂಲಕ ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಇವರಿಬ್ಬರು ಹಲವು ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂದು ಕೂಡ ಸಿಎಂ ಸಿದ್ದರಾಮಯ್ಯ ವಿಶ್ವನಾಥ್​ ವಿರುದ್ಧ ಪರೋಕ್ಷವಾಗಿ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರೇನು ದೇವರಾಜ ಅರಸು ರೀತಿ ಆಡಳಿತ ಕೊಟ್ಟಿದ್ದಾರಾ? ಈ ಐದು ವರ್ಷ ಅವರೇನು ಆಡಳಿತ ಕೊಟ್ಟರು ಎಂಬುದು ಜನರಿಗೆ ಗೊತ್ತಿದೆ. ಉತ್ತಮ ಆಡಳಿತ ನೀಡಿದ್ದರೆ ಕಾಂಗ್ರೆಸ್ 130 ಸ್ಥಾನದಿಂದ ಯಾಕೆ 78 ಸ್ಥಾನಕ್ಕೆ ಇಳಿಯಬೇಕಾಗಿತ್ತು? ಎಂದು ವಿಶ್ವನಾಥ್​ ಅವರು ಇತ್ತೀಚೆಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಮಾತನಾಡುತ್ತ ಪ್ರಶ್ನಿಸಿದ್ದರು. ಅಲ್ಲದೆ ಸಿದ್ದರಾಮಯ್ಯ ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು.

ಈ ಹೇಳಿಕೆಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, ವಿಶ್ವನಾಥ್​ ಹೊಟ್ಟೆಕಿಚ್ಚಿನಿಂದ ಹೀಗೆ ಮಾತನಾಡುತ್ತಿದ್ದಾನೆ. ಜನಪ್ರಿಯ ಸಿಎಂ ಯಾರು ಎಂದು ಕೇಳಿದರೆ ಜನರೇ ಹೇಳುತ್ತಾರೆ ಎಂದಿದ್ದರು.
ಈಗ ಮತ್ತೆ ವಿಶ್ವನಾಥ್​ ಅವರ ಅದೇ ಹೇಳಿಕೆಗೆ ಸಿದ್ದರಾಮಯ್ಯ ಸರಣಿ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ನನ್ನ ಯಾವ ಕಾರ್ಯಕ್ರಮವೂ ತಾತ್ಕಾಲಿಕವಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಟೀಕಾಕಾರರು ನೆನಪಿಟ್ಟುಕೊಳ್ಳಲಿ, ಜಾಗೃತ ಮತದಾರರು ಇರುವವರೆಗೂ ಇವೆಲ್ಲವೂ ಶಾಶ್ವತ ಕಾರ್ಯಕ್ರಮಗಳು ಎಂದಿದ್ದಾರೆ.

ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಗೊಂದಲ ಸೃಷ್ಟಿಮಾಡುತ್ತಿದ್ದಾರೆ ಎಂಬ ವಿಶ್ವನಾಥ್​ ಹೇಳಿಕೆಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಇದ್ದಾರೆ. ಮತ್ತೆ ಈ ಬಗ್ಗೆ ಚರ್ಚೆ ಅಪ್ರಸ್ತುತ ಎಂದಿದ್ದಾರೆ.

ಅಲ್ಲದೆ, ಸಭೆ, ಸಮಾರಂಭಗಳಿಗೆ ಹೋದಾಗೆಲ್ಲ ಜನರು ನೀವೇ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಾರೆ. ಆಗ ಅವರೆದುರು, ನೀವು ನಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದೇನೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.