ಶುಚಿತ್ವಕ್ಕೆ ಧಕ್ಕೆ ತರಲಿವೆ ಮೀನು ಮಳಿಗೆ !

ಎಂ.ಎ.ಅಜೀಜ್ ಸಿದ್ದಾಪುರ
ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತವು ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ಮೀನು ಮಳಿಗೆಗಳನ್ನು ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಪಟ್ಟಣದ ಶುಚಿತ್ವಕ್ಕೆ ಧಕ್ಕೆ ತರುವ ಆತಂಕ ಎದುರಾಗಿದೆ.

ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿರುವ ಕೋಳಿ ಮತ್ತು ಮಾಂಸ ವ್ಯಾಪಾರಿಗಳಿಂದ ಅಶುಚಿತ್ವ ಉಂಟಾಗುತ್ತಿದೆ ಎಂಬುದಾಗಿ ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ದ್ವನಿ ಎತ್ತಿದ್ದರು. ಮಾರುಕಟ್ಟೆಯಲ್ಲಿ ಕಟ್ಟಡ ನಿರ್ಮಿಸಿ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಪಟ್ಟಣದಲ್ಲಿ ಶುಚಿತ್ವ ಕಾಪಾಡುವಂತೆ ತೀರ್ಮಾನಿಸಲಾಯಿತು.

ಅದರಂತೆ ಮಾರುಕಟ್ಟೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಯಿತು. ಆದರೆ, ಆಡಳಿತ ಮತ್ತು ವ್ಯಾಪಾರಿಗಳ ನಡುವಿನ ಒಳ ಒಪ್ಪಂದದಿಂದಾಗಿ ಕೋಳಿ ಮತ್ತು ಮಾಂಸ ವ್ಯಾಪಾರದ ಅಂಗಡಿಗಳು ಪಟ್ಟಣದಲ್ಲಿಯೇ ಇದ್ದು, ಅಶುಚಿತ್ವ ಮತ್ತಷ್ಟು ಬಿಗಡಾಯಿಸಿದೆ. ಇದರ ಮಧ್ಯೆಯೇ ಇದೀಗ ಪಟ್ಟಣದಲ್ಲಿ ಮತ್ತೆ ಮೀನು ಮಳಿಗೆಗಳನ್ನು ನಿರ್ಮಿಸುತ್ತಿರುವ ಗ್ರಾಮಾಡಳಿತದ ನಡೆ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ವ್ಯಾನ್ ಸ್ಟ್ಯಾಂಡ್ ತೆರವು: ಖಾಸಗಿ ವಾಹನಗಳ ನಿಲುಗಡೆಗೆ ಜಾಗವಿಲ್ಲ ಎಂಬ ನೆಪವೊಡ್ಡಿ ಅಲ್ಲಿದ್ದ ವ್ಯಾನ್‌ಸ್ಟ್ಯಾಂಡ್ ಅನ್ನು ತೆರವುಗೊಳಿಸಿ ಖಾಸಗಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಸ್ಟಾೃಡ್ ತೆರವು ಮಾಡುವುದನ್ನು ಬಿಎಂಎಸ್ ಸಹಿತ ಹಲವು ಸಂಘಟನೆಗಳು ವಿರೋಧಿಸಿದ್ದವು. ಆದರೆ ಗ್ರಾಪಂ ಆಡಳಿತ ಯಾವುದಕ್ಕೂ ಮಣಿಯದೆ ಸ್ಟ್ರಾೃಂಡ್ ತೆರವುಗೊಳಿಸಿ ಆ ಜಾಗದಲ್ಲಿ ಮೀನು ಮಳಿಗೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಜಾಗ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟದ್ದಾಗಿರುವುದರಿಂದ ರಸ್ತೆ ವಿಸ್ತರಣೆ ವೇಳೆ ಮಳಿಗೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಸಾರ್ವಜನಿಕರ ಹಣ ದುರುಪಯೋಗವಾಗುವ ಕಾರಣ ಇದು ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಕ್ರಿಯಾ ಯೋಜನೆಯಲ್ಲಿಲ್ಲ: ಗ್ರಾಪಂನಲ್ಲಿ ಯಾವುದೇ ಕಾಮಗಾರಿ ಮಾಡಿಸುವಾಗಲೂ ಅದನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕಿದೆ. ಆದರೆ, ಮೀನು ಮಳಿಗೆ ನಿರ್ಮಿಸುವ ಯೋಜನೆಯನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿಲ್ಲ. ಬದಲಿಗೆ ಕೆಲವರ ವೈಯಕ್ತಿಕ ಹಿತಾಸಕ್ತಿ ಗಮನದಲ್ಲಿಟ್ಟಿಕೊಂಡು ಕಾಮಗಾರಿ ಆರಂಭಿಸಲಾಗಿದೆ. ಜತೆಗೆ ಮಳಿಗೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ.

ಇಂಗು ಗುಂಡಿ ಸಮೀಪ: ಸಾರ್ವಜನಿಕ ಶೌಚಗೃಹದ ಇಂಗುಗುಂಡಿ ಸಮೀಪ ಮಳಿಗೆ ನಿರ್ಮಾಣ ಮಾಡುತ್ತಿದ್ದು, ಗ್ರಾಪಂ ಬಹಿರಂಗವಾಗಿಯೇ ಅಶುಚಿತ್ವಕ್ಕೆ ಬೆಂಬಲ ನೀಡಿದಂತಾಗಿದೆ. ಈಗಾಗಲೇ ಪಟ್ಟಣದಲ್ಲಿ ಕಸವಿಲೇವಾರಿ ಸಮರ್ಪಕವಾಗಿ ಆಗದೇ ತ್ಯಾಜ್ಯಗಳು ಅಲ್ಲಲ್ಲಿ ಕೊಳೆತು ದುರ್ನಾತ ಬೀರುತ್ತಿದೆ. ಇದರ ಜತೆಗೆ ಮೀನು ಮಳಿಗೆಗಳು ಸೇರಿಕೊಂಡರೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಏಕ ಪಕ್ಷೀಯ ನಿರ್ಧಾರ: ಮಳಿಗೆಗಳ ನಿರ್ಮಾಣ ವಿಚಾರದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ತಮ್ಮ ಅನಿಸಿಕೆಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಕೆಲವು ಗ್ರಾಪಂ ಸದಸ್ಯರು ದೂರಿದ್ದಾರೆ. ಮಳಿಗೆ ನಿರ್ಮಾಣ, ಕರಡಿಗೋಡು ರಸ್ತೆಯಲ್ಲಿ ಇಂಟರ್‌ಲಾಕ್ ಅಳವಡಿಕೆ ಮುಂತಾದ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರೂ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ಮಳಿಗೆ ನಿರ್ಮಿಸುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ಸಂಘಟನೆಗಳ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದಾರೆ.