ಕಸ ವಿಲೇವಾರಿ ಜಾಗದ ಗೊಂದಲ ಬಗೆಹರಿಸಲು ಡಿಸಿ ಬಳಿ ನಿಯೋಗ

ಸಿದ್ದಾಪುರ: ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವ ಸಲುವಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ವರ್ತಕರು ಮತ್ತು ಗ್ರಾಮಸ್ಥರ ಸಭೆ ಜರುಗಿತು.

ಕಸ ವಿಲೇವಾರಿ ಗ್ರಾಮದ ಬಹು ದೊಡ್ಡ ಸಮಸ್ಯೆಯಾಗಿದ್ದು, ಜಾಗದ ಕೊರತೆಯಿಂದಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕಂದಾಯ ಇಲಾಖೆ ಗುರುತಿಸಿ, ಜಿಲ್ಲಾಧಿಕಾರಿ ನೀಡಿರುವ ಜಾಗ ಕಸ ವಿಲೇವಾರಿಗೆ ಸೂಕ್ತವಲ್ಲ. ಈ ಜಾಗದಲ್ಲಿ ಕಸ ವಿಲೇವಾರಿಗೆ ಕಾನೂನು ತೊಡಕು ಎದುರಾಗಲಿದೆ ಎಂದು ಅಧ್ಯಕ್ಷ ಮಣಿ ಮಾಹಿತಿ ನೀಡಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗ ಆಗಿರುವುದರಿಂದ ಅಲ್ಲಿನ ಗ್ರಾಮಾಡಳಿತ ವಿಲೇವಾರಿಗೆ ಒಪ್ಪುತ್ತಿಲ್ಲ. ಜಲ ಮೂಲಗಳು ಮತ್ತು ಶಾಲೆ ಸಮೀಪ ಇರುವುದರಿಂದ ಪರಿಸರ ಮತ್ತು ನೈಮಲ್ಯ ಇಲಾಖೆಯ ಆಕ್ಷೇಪಣೆ ಕೂಡ ಇದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮಸ್ಥ ರಮೇಶ್, ನೀವು ಕಾನೂನು ತೊಡಕು ಹೇಳುತ್ತಾ ಕುಳಿತು ಕೊಂಡರೆ ಜಾಗದ ಸಮಸ್ಯೆ ಬಗೆಹರಿಯುವುದೇ ಇಲ್ಲ. ಜಿಲ್ಲಾಧಿಕಾರಿ ಅವರು ಕಸ ವಿಲೇವಾರಿಗೆ ಎಂದೇ ಗುರುತಿಸಿ ನೀಡಿದ ಜಾಗವನ್ನು ಮತ್ತೊಂದು ಇಲಾಖೆ ತಡೆಯವುದಾದರೆ ಯಾರಿಂದ ತಪ್ಪು ಸಂಭವಿಸಿದೆ ಎಂದು ಪ್ರಶ್ನೆ ಮಾಡಿದರು. ಕಸ ವಿಲೇವಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಗ್ರಾಮಸ್ಥೆರಲ್ಲರೂ ಒಗ್ಗೂಡಿ ಹೋರಾಟ ಮಾಡೋಣ ಎಂದರು.

ಕಾನೂನು ತಜ್ಞರ ಸಲಹೆ ಪಡೆದು ಸಮಸ್ಯೆ ಇತ್ಯರ್ಥ ಮಾಡಿ ಅದೇ ಜಾಗದಲ್ಲಿ ವ್ಯವಸ್ಥೆ ಮಾಡುವುದು ಒಳಿತು ಎಂದು ಗುರುದರ್ಶನ್ ಅಭಿಪ್ರಾಯಪಟ್ಟರು. ಸಿಕ್ಕ ಜಾಗದಲ್ಲಿಯೇ ವೈಜ್ಞಾನಿಕವಾಗಿ ಮಾಡುವುದಾದರೆ ಯಾರಿಗೂ ಸಮಸ್ಯೆ ಇರುವುದಿಲ್ಲ. ಜಿಲ್ಲಾಧಿಕಾರಿಯವರನ್ನು ಸ್ಥಳಕ್ಕೆ ಕರೆಸಿ ಜಾಗದ ಬಗ್ಗೆ ಮತ್ತು ಗ್ರಾಮದ ಸಮಸ್ಯೆಯನ್ನು ಮನದಟ್ಟು ಮಾಡಿಸುವುದು ಒಳಿತು ಎಂದು ಮೂಸಾ ಸಲಹೆ ನೀಡಿದರು.

ಕಂದಾಯ ಇಲಾಖೆಯ ಎಡವಟ್ಟಿನಿಂದ ದೊರೆತ ಜಾಗ ಇಲ್ಲದಂತಾಗಿದೆ. ಪರಿಶೀಲನೆ ಮಾಡದೆ ಜಾಗ ಗುರುತಿಸಿ ನೀಡಿರುವುದೇ ಸಮಸ್ಯೆಗೆ ಕಾರಣ ಎಂದು ಪಿಡಿಒ ವಿಶ್ವನಾಥ್ ಆರೋಪ ಮಾಡಿದರು. ಕಾನೂನಿನ ಚೌಕಟ್ಟಿನಲ್ಲಿ ಆ ಜಾಗದಲ್ಲಿ ಕಸ ವಿಲೇವಾರಿ ಸಾಧ್ಯವಿಲ್ಲ. ಹಾಗಾಗಿ, ಬದಲಿ ವ್ಯವಸ್ಥೆ ಹುಡುಕುವುದು ಸೂಕ್ತ ಎಂದರು. ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಕೋರಲು ತೀರ್ಮಾನಿಸಲಾಯಿತು. ಅದಕ್ಕಾಗಿ ವರ್ತಕರು ಮತ್ತು ಗ್ರಾಮಸ್ಥರನ್ನೊಳಗೊಂಡ ಸಮಿತಿ ರಚಿಸಲಾಯಿತು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಎಂ.ಜೆನೀಶ್, ಗ್ರಾಪಂ ಸದಸ್ಯರು, ಗ್ರಾಮಸ್ಥ ಎ.ಎಸ್.ಮುಸ್ತಫಾ, ಸುಬ್ರಮಣಿ, ಕೆ.ಡಿ.ನಾಣಯ್ಯ, ಪ್ರತೀಶ ಇದ್ದರು.