More

    ಸಿದ್ದಾಪುರ ತಾಲೂಕು ಕೆಎಫ್​ಡಿ ಹಾಟ್​ಸ್ಪಾಟ್

    ಸಿದ್ದಾಪುರ: ತಾಲೂಕಿನಲ್ಲಿ ಕೆಎಫ್​ಡಿ ( ಕ್ಯಾಸನೂರು ಫಾರೆಸ್ಟ್ ಡಿಸೆಸ್)ಗೆ ಎರಡನೇ ಬಲಿಯಾಗಿದೆ. ಕೊರ್ಲಕೈ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ 60 ವರ್ಷದ ಮಹಿಳೆ ಭಾನುವಾರ ರಾತ್ರಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಮಣಿಪಾಲ ಆಸ್ಪತ್ರೆಯಲ್ಲಿ 20 ದಿನದ ಹಿಂದೆ ಚಿಕಿತ್ಸೆ ಪಡೆದು ನಂತರ ಕಳೆದ ಮೂರು ದಿನದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ.

    ಫೆ. 21ರಂದು ಜಿಡ್ಡಿಯಲ್ಲಿ 65 ವರ್ಷದ ಮಹಿಳೆ ಮೃತಪಟ್ಟಿದ್ದಳು. ಕೆಎಫ್​ಡಿ ಹಾಟ್​ಸ್ಪಾಟ್ ಎಂದೆನಿಸಿಕೊಂಡಿರುವ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗ ಆತಂಕದ ಛಾಯೆ ಮೂಡಿದೆ. ತಾಲೂಕಿನಲ್ಲಿ ಇಂದಿನವರೆಗೆ 43 ಕೆಎಫ್​ಡಿ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೂವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಮೂವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ ಎಂದು ಅರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    43 ಕೆಎಫ್​ಡಿ ಪ್ರಕರಣ ದಾಖಲಾಗಿದ್ದರೂ ಆರೋಗ್ಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಶಾಸಕರು ಒಂದು ಬಾರಿ ಹಾಗೂ ಎಸಿ ಎರಡು ಬಾರಿ ಸಿದ್ದಾಪುರದ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾಗೂ ದಿನನಿತ್ಯದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ರಕ್ತ ಪರೀಕ್ಷೆ ವರದಿ ವಿಳಂಬ: ರೋಗ ಲಕ್ಷಣ ಇರುವವರ ರಕ್ತ ತಪಾಸಣೆ ವರದಿ ಆರೇಳು ದಿನಕ್ಕೆ ಬರುತ್ತದೆ. ಇದರಿಂದ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ರಕ್ತ ತಪಾಸಣೆ ವರದಿ ಬರುವವರೆಗೂ ಸೂಕ್ತ ಚಿಕಿತ್ಸೆ ರೋಗಿಗಳಿಗೆ ಸಿಗುತ್ತಿಲ್ಲ ಎನ್ನುವ ಆಕ್ಷೇಪ ಸಾರ್ವಜನಿಕರದು.

    ಮತ್ತೆ ಉಲ್ಬಣ: ಮಂಗನ ಕಾಯಿಲೆ ಎರಡು ವರ್ಷಗಳ ನಂತರ ಮತ್ತೆ ಉಲ್ಬಣವಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚು ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಕಾಯಿಲೆಗೆ ನಿರ್ದಿಷ್ಟ ಔಷಧ ಇಲ್ಲ. ರೋಗ ಲಕ್ಷಣ ಆಧರಿಸಿ, ಜ್ವರ, ಕೆಮ್ಮಿಗೆ ಔಷಧ ನೀಡಬೇಕಾಗಿದೆ. ಕೆಲ ವರ್ಷಗಳಿಂದ ನೀಡುತ್ತಿದ್ದ ರೋಗ ನಿರೋಧಕ ಲಸಿಕೆಯನ್ನು ಸರ್ಕಾರ ಸ್ಥಗಿತ ಮಾಡಿದೆ.

    ಸಚಿವರ ಹೇಳಿಕೆ ಘೊಷಣೆಗೆ ಸೀಮಿತ: ಮಣಿಪಾಲ ಆಸ್ಪತ್ರೆ ಸೇರಿದಂತೆ ಕೆಎಫ್​ಡಿ ಇರುವ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್​ಡಿ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹದಿನೈದು ದಿನದ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಫೆ. 21ರಂದು ಮೃತಪಟ್ಟ ಮಹಿಳೆಗೆ ಮಣಿಪಾಲದಲ್ಲಿ ಹಾಸಿಗೆ ಸಿಗದೇ ಖಾಸಗಿ ಆಸ್ಪತ್ರೆಗೆ ಸೇರಿದ್ದರು. ಸಚಿವರ ಹೇಳಿಕೆ ಕೇವಲ ಘೊಷಣೆಗೆ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts