ಸಿದ್ದಾಪುರ: ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಅನೇಕ ರೈತರ ಜೀವನಾಡಿಯಾಗಿ ಎಲ್ಲರ ಸಹಕಾರದಿಂದ ಇಂದು ಸದೃಢವಾಗಿ ಬೆಳೆದು ನಿಂತಿದೆ ಎಂದು ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಹೇಳಿದರು.
ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ 48ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
2023-24ನೇ ಸಾಲಿನಲ್ಲಿ ಸಂಘವು 18.11 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.4 ರಷ್ಟು ಡಿವಿಡೆಂಡ್ ನೀಡುವುದಾಗಿ ಹೇಳಿದರು. ರೈತರು ತಮ್ಮ ಮಹಸೂಲುಗಳನ್ನು ಸಂಘದ ಮುಖಾಂತರವೇ ವಿಕ್ರಯಿಸಿ, ಕಡ್ಡಾಯ ಠೇವಿನ ಪ್ರಯೋಜನ ಪಡೆದುಕೊಳ್ಳಬೇಕು. ಸಂಘದ ಸದಸ್ಯರ ಅನುಕೂಲಕ್ಕಾಗಿ ಸೂಪರ್ ಮಾರ್ಕೆಟ್ ಸೇವೆ ಆರಂಭಿಸಲಾಗಿದ್ದು ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಸಂಘದ 21ಜನ ಹಿರಿಯ ಸದಸ್ಯರನ್ನು ಹಾಗೂ ಸಂಘದಲ್ಲಿ ಹೆಚ್ಚು ಕಿರಾಣಿ ಖರೀದಿ ಮಾಡಿದ 3ಜನರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಪರಮೇಶ್ವರ ನಾಯ್ಕ, ಗಣಪತಿ ನಾಯ್ಕ, ಲಕ್ಷ್ಮಣ ನಾಯ್ಕ, ಸುಬ್ರಾಯ ಹೆಗಡೆ, ರವಿ ನಾಯ್ಕ, ಭಾರತಿ ಭಟ್ಟ, ವಿಜಯಾ ನಾಯ್ಕ, ಗೌರ್ಯ ನಾಯ್ಕ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಗೌಡ ವಾರ್ಷಿಕ ವರದಿ ವಾಚಿಸಿದರು.
ಉಪಾಧ್ಯಕ್ಷ ಗಣೇಶ ನಾರಾಯಣ ಭಟ್ಟ, ಆಡಳಿತ ಮಂಡಳಿ ಸದಸ್ಯ ಕೆ.ಪಿ. ರಘುಪತಿ ಕ್ಯಾದಗಿ, ನಾಮ ನಿರ್ದೇಶಿತ ಸದಸ್ಯ ಆರ್.ಜಿ. ಹೆಗಡೆ ಬಿಳಲಗೆ ನಿರ್ವಹಿಸಿದರು.