ನೆಲ್ಯಹುದಿಕೇರಿ ಗ್ರಾಪಂ ಕಚೇರಿಗೆ ಮುತ್ತಿಗೆ

ಸಿದ್ದಾಪುರ: ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಸಿಪಿಎಂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕಾಡಾನೆ ಹಾವಳಿ, ಗುಂಡಿ ಬಿದ್ದ ರಸ್ತೆಗಳು, ತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಶೌಚಗೃಹ, ನಿವೇಶನ, ಮನೆ, ಹಕ್ಕುಪತ್ರ ಮುಂತಾದ ಹಲವು ಸಮಸ್ಯೆಗಳಿದ್ದರೂ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಿಪಿಎಂ ಪಕ್ಷದ ನೆಲ್ಯಹುದಿಕೇರಿ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಈ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸವಿದ್ದು, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಅಲ್ಲಿ ಕಾಡಾನೆ ಹಾವಳಿಯಿಂದ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಿದೆ. ಹಲವು ಕುಟುಂಬಗಳು ಮನೆ ಮತ್ತು ನಿವೇಶನ ಇಲ್ಲದವರಾಗಿದ್ದಾರೆ. ಇದ್ದ ಕೆಲವು ಮನೆಗಳು ಮಳೆಯಿಂದ ಹಾನಿಗೀಡಾಗಿ ವಾಸ ಮಾಡಲು ಆಗುತ್ತಿಲ್ಲ. ಮಳೆ ಬಂದರೆ ಕುಸಿದು ಬೀಳುವ ಹಂತದಲ್ಲಿವೆ. ಆದರೂ ಆಡಳಿತ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.

ತ್ಯಾಜ್ಯ ವಿಲೇವಾರಿಗೆ ಶಾಶ್ವತ ಜಾಗ ಕಂಡುಕೊಳ್ಳಲಾಗದೆ ಗ್ರಾಪಂ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಹಾಗೂ ಕಾವೇರಿ ನದಿದಡ ಸೇರಿ ಹಲವೆಡೆ ಕಸವನ್ನು ಸುರಿಯಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ದುರ್ವಾಸನೆ ಬೀರುತ್ತಿದ್ದು, ಮಾರಕ ರೋಗ ಹರಡುವ ಭೀತಿಯಿದೆ. ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಗ್ರಾಮದ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಕೂಡಲೇ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಗೃಹ ವ್ಯವಸ್ಥೆ ಇಲ್ಲದೆ ಮಹಿಳೆಯರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಶೌಚಗೃಹ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಅಧಿಕಾರಿ ವಿರುದ್ಧ ಆಕ್ರೋಶ: ಗ್ರಾಪಂ ಎದುರು ಪ್ರತಿಭಟಿಸುವುದಾಗಿ ಹದಿನೈದು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಜನಪ್ರತಿನಿಧಿಗಲಾಗಲಿ, ಅಧಿಕಾರಿಗಳಾಗಲಿ ಬಂದಿಲ್ಲ ಎಂದು ದೂರಿದರು.

ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್ ಮನವಿ ಸ್ವೀಕರಿಸಲು ತೆರಳಿದಾಗ ಪಿಡಿಒ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ತಡವಾಗಿ ಬಂದ ಪಿಡಿಒ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಮನವಿ ಪತ್ರ ನೀಡಿದರು. ಮುಂದಿನ ಹದಿನೈದು ದಿನಗಳಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *