ಸಿದ್ದಾಪುರ: ನಿರಂತರವಾಗಿ ಸುರಿದ ಮಳೆಯಿಂದ ಅಡಕೆಗೆ ಮಾರಕ ಕೊಳೆ ರೋಗ ವ್ಯಾಪಕವಾಗಿ ಹರಡಿದೆ. ಬೆಳೆ ಉಳಿಸಿಕೊಳ್ಳುವಲ್ಲಿ ಅಡಕೆ ಬೆಳೆಗಾರರು ಹೈರಾಣಾಗಿದ್ದಾರೆ.
ತಾಲೂಕಿನಲ್ಲಿ 5642.48 ಹೆಕ್ಟೇರ್ನಷ್ಟು ಅಡಕೆ ಕ್ಷೇತ್ರ ಇದೆ. ಅಲ್ಲದೆ, ಇನ್ನು ಅರಣ್ಯ ಒತ್ತುವರಿಯಲ್ಲಿ ಸುಮಾರು 1200 ರಿಂದ 1300 ಹೆಕ್ಟೇರ್ನಷ್ಟು ಅಡಕೆ ಕ್ಷೇತ್ರ ಇದೆ ಎಂದು ಅಂದಾಜಿಸಲಾಗಿದೆ. ಎಲ್ಲ ಕಡೆಗಳಲ್ಲಿ ಕೊಳೆ ರೋಗ ಆವರಿಸಿಕೊಳ್ಳುತ್ತಿದೆ. ಜುಲೈನಲ್ಲಿ ಬಿದ್ದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಅಡಕೆ ತೋಟಕ್ಕೆ ಹೊಳೆ-ಹಳ್ಳಗಳ ನೀರು ನುಗ್ಗಿದ ಪರಿಣಾಮ ಹಾಗೂ ಮಳೆ-ಗಾಳಿ-ಬಿಸಿಲಿನ ಆಟಕ್ಕೆ ಅಡಕೆ ಕೊಳೆರೋಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಅಲ್ಲದೆ, ಗಾಳಿಯಿಂದ ಸಾವಿರಾರು ಅಡಕೆ ಮರಗಳು ಧರೆಗುರುಳಿವೆ.
ಕೊಳೆ ರೋಗ ನಿಯಂತ್ರಣಕ್ಕಾಗಿ ಬೋರ್ಡೆ ದ್ರಾವಣವನ್ನು ಎರಡು ಸಲ ಸಿಂಪಡಿಸಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ . ಮಳೆ-ಗಾಳಿ ಮುಂದುವರೆದರೆ ಅಡಕೆ ಬೆಳೆ ಮಾತ್ರ ಅಲ್ಲ ಅಡಕೆ ಮರಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ಬೆಳೆಗಾರರಾದ ನಾರಾಯಣ ನಾಯ್ಕ ಅಳಲು ತೋಡಿಕೊಂಡರು.
ಎಲ್ಲಿ ಹೋದರೂ ಅಡಕೆ ಕೊಳೆ ರೋಗದ್ದೆ ಮಾತು. ಬೆಳೆ ಉಳಿಸಿಕೊಳ್ಳುವುದು ಕಷ್ಟ ಎನ್ನುವ ಮಾತು ಕೇಳಿಬರುತ್ತಿದೆ. ತಾಲೂಕಿನಲ್ಲಿ ಕೊಳೆ ರೋಗ ಕಾಣಿಸಿಕೊಂಡ ತೋಟಗಳ ಸಮೀಕ್ಷೆಯನ್ನು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ.
ಮಳೆ-ಗಾಳಿಗೆ ಅಡಕೆ ಬೆಳೆ ಶೇ. 50ರಷ್ಟು ನಾಶವಾಗಿದೆ. ಇನ್ನು ಅಡಕೆ ಕೊಳೆರೋಗ ಎಲ್ಲ ಕಡೆಗೂ ವ್ಯಾಪಿಸಿದೆ. ಸರ್ಕಾರ ಅಡಕೆ ಕೊಳ ೆರೋಗದಿಂದ ಹಾನಿಯಾದ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹೆಚ್ಚು ಗಮನ ನೀಡಿ ಅಡಕೆ ಬೆಳೆಗಾರರ ಹಿತ ಕಾಪಾಡಬೇಕು.
ದೇವರು ಹೆಗಡೆ ಅರಶೀನಗೋಡ ಹಿರಿಯ ಕೃಷಿಕ