ರಸ್ತೆ ಬಿರುಕು, ಗುಡ್ಡ ಕುಸಿತ

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಮದ್ದಿನಕೇರಿ ಯಲ್ಲಿ ಅಂದಾಜು 150 ಮೀಟರ್​ನಷ್ಟು ರಸ್ತೆ ಹಾಗೂ ಗುಡ್ಡ ಬಿರುಕು ಬಿಟ್ಟಿರುವುದರಿಂದ ಜನ ಆತಂಕಕ್ಕೀಡಾಗಿ ದ್ದಾರೆ. ಮದ್ದಿನಕೇರಿಯ ಗುಡ್ಡ ಹಾಗೂ ರಸ್ತೆಯ ಕೆಳಭಾಗದಲ್ಲಿ ಲ್ಲಿ ಏಳು ಮನೆಗಳಿವೆ. ಈಗಾಗಲೇ ಐವತ್ತು ಅಡಿಯಷ್ಟು ಗುಡ್ಡ ಕುಸಿದಿದ್ದು, ಅದರ ಮುಂದಿನ ಭಾಗ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಹೆಚ್ಚಿದೆ. ಒಮ್ಮೆ ಗುಡ್ಡ ಕುಸಿದರೆ ಅಂದಾಜು 12 ಎಕರೆ ಅಡಕೆ ತೋಟ ಹಾಗೂ ಮನೆಗಳಿಗೆ ಹಾನಿ ಉಂಟಾಗಲಿದೆ. ಊರಿಗೆ ತೆರಳಲು ಇದೊಂದೇ ರಸ್ತೆಯಿದ್ದು, ಬಂದ್ ಆಗುವ ಸಾಧ್ಯತೆ ಇದೆ.
ಆತಂಕದಲ್ಲಿರುವ ಮನೆ: ಜಿ.ಎನ್. ಹೆಗಡೆ, ಎಂ.ಕೆ. ನಾಯ್ಕ, ಸುಬ್ರಾಯ ಹೆಗಡೆ, ಪಾರ್ವತಿ ಎಂ. ಹೆಗಡೆ, ಸೀತಾರಾಮ ನಾಯ್ಕ, ಸುರೇಶ ನಾಯ್ಕ, ಉದಯ ಭಂಡಾರಿ ಹಾಗೂ ರಾಮಚಂದ್ರ ಭಂಡಾರಿ ಮನೆಯವರು ಆತಂಕದಲ್ಲಿದ್ದಾರೆ.ನಿತ್ಯ ಶಾಲೆ, ಕಾಲೇಜ್​ಗಳಿಗೆ ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ರಸ್ತೆ ಬಹಳ ಬಿರುಕು ಬಿಟ್ಟರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಎದುರು ಅಳಲು ತೋಡಿಕೊಂಡರು. ಊರಿಗೆ ತೆರಳುವ ರಸ್ತೆಯನ್ನು ಬೇರೆ ಕಡೆ ಮಾಡಿಕೊಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಪಟ್ಟರಾಜ ಗೌಡ ಹಾಗೂ ಜಿಪಂ ಇಂಜನಿಯರ್​ಗೆ ಶಾಸಕರು ಸೂಚಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕಾಗೇರಿ, ರಾಜ್ಯ ಸರ್ಕಾರ ಜಿಲ್ಲೆಗೆ ಒಂದು ಪೈಸೆ ಕೂಡ ಪರಿಹಾರ ನೀಡಿಲ್ಲ. ಉಳಿದ ಜಿಲ್ಲೆಗಳಿಗೆ ಪರಿಹಾರ ನೀಡಿದೆ. ಕಂದಾಯ ಸಚಿವರು ಇದೇ ಜಿಲ್ಲೆಯವರಾಗಿದ್ದಾರೆ. ರಾಜ್ಯ ಸರ್ಕಾರ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ. ಹಾಸನ, ಮಂಡ್ಯ, ರಾಮನಗರಕ್ಕೆ ಮಾತ್ರ ಸರ್ಕಾರ ಹಣ ನೀಡುತ್ತಿದೆ. ಜಿಲ್ಲೆಗೂ ಕೂಡ ಸರ್ಕಾರ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದರು. ನಂತರ ಬಿಳಗಿ, ಕ್ಯಾದಗಿ, ದೊಡ್ಮನೆ ಗ್ರಾಪಂ ವ್ಯಾಪ್ತಿಯ ಅಡಕೆ ಕೊಳೆ ಬಂದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಪ್ರಮುಖರಾದ ಕೃಷ್ಣಮೂರ್ತಿ ಕಡಕೇರಿ ಹಾಗೂ ಸ್ಥಳೀಯ ಮುಖಂಡರು, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿದ್ದರು.
ಎರಡು ಮನೆಗಳು ಕುಸಿತ
ಸಿದ್ದಾಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆ ಮತ್ತು ಭಾರಿ ಗಾಳಿಗೆ ಎರಡು ಮನೆಗಳು ಕುಸಿದಿವೆ. ವಾಜಗೋಡ ಗ್ರಾಪಂ ವ್ಯಾಪ್ತಿಯ ಕೆರೆಮನೆಯ ಸುಶೀಲಾ ಅವರ ಮನೆ ಕುಸಿದು ಅಂದಾಜು 7,075 ರೂ. ಹಾಗೂ ದಾನ್ಮಾವಿನ ರಾಜಕುಮಾರ ಗೌಡ ಅವರ ಮನೆಯ ಗೋಡೆ ಬಿದ್ದು 3,450 ರೂ. ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ತಾಲೂಕಿನಲ್ಲಿ ಇಂದಿನವರೆಗೆ 2,697.8 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ 1,878.6 ಮಿ.ಮೀ. ಮಳೆ ಬಿದ್ದು ದಾಖಲಾಗಿತ್ತು.
ಶಿರಸಿಯ ಶಂಕರಹೊಂಡದ ಪಿಚ್ಚಿಂಗ್ ಗೋಡೆ ಕುಸಿತ
ಶಿರಸಿ: ತಾಲೂಕಿನಾದ್ಯಂತ ಮಂಗಳವಾರ ಬೆಳಗಿನವರೆಗೆ 20 ಮಿ. ಮೀ. ಮಳೆಯಾಗಿದ್ದು, ಗಾಳಿಯ ಪ್ರಮಾಣ ಜೋರಾಗಿದೆ.
ಇಲ್ಲಿಯ ಶಂಕರಹೊಂಡದ ಪಿಚ್ಚಿಂಗ್ ಗೋಡೆ ಕುಸಿದಿದೆ. ಅಘನಾಶಿನಿ ನದಿಯ ಉಗಮ ಸ್ಥಾನವಾದ ಈ ಸ್ಥಳ ನಿರ್ಲಕ್ಷ್ಯ್ಕೆ ಒಳಗಾದ ಹಿನ್ನೆಲೆಯಲ್ಲಿ ಶಿರಸಿ ಜೀವಜಲ ಕಾರ್ಯಪಡೆಯವರು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಈ ವರ್ಷ ದುರಸ್ತಿಪಡಿಸಿದ್ದರು. ಈ ಸ್ಥಳ ಪ್ರವಾಸಿ ತಾಣವಾಗಿಯೂ ರೂಪುಗೊಂಡಿತ್ತು. ಮಳೆಯಿಂದಾಗಿ ಪಿಚಿಂಗ್ ಗೋಡೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.
ವರದಾ ನದಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಬನವಾಸಿ ಸುತ್ತಮುತ್ತಲಿನ 300 ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ನೀರು ಇಳಿಯಬಹುದೆಂದು ರೈತರು ನಿರೀಕ್ಷೆ ಹೊಂದಿದ್ದರು. ಆದರೆ, ಮಂಗಳವಾರ ಮತ್ತೆ ಮಳೆ ಆರಂಭಗೊಂಡಿರುವುದು ಆತಂಕ ಸೃಷ್ಠಿಸಿದೆ.
ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗದಗೆಪ್ಪ ಉಪ್ಪಿನ ಅವರ ಮನೆ ಗೋಡೆ ಕುಸಿದು 15 ಸಾವಿರ ರೂಪಾಯಿ, ಗುಡ್ನಾಪುರದ ಲಕ್ಷ್ಮೀ ಮಡಿವಾಳ ಅವರ ಮನೆ ಗೋಡೆ ಕುಸಿದು 2 ಸಾವಿರ ರೂಪಾಯಿ, ಗೋಣೂರಿನ ಭಾವೇಶ ನಾಯ್ಕ ಅವರ ಮನೆ ಗೋಡೆ ಕುಸಿದು 8 ಸಾವಿರ ರೂಪಾಯಿ, ಅಬೇಲ್ ಗೋನ್ಸಾಲ್ವೇಸ್ ಅವರ ಮನೆ ಕುಸಿದು 12,400 ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *