ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಮಾದರಿ

<ಪ್ರತಿ ತರಗತಿಯಲ್ಲೂ ಸ್ಮಾರ್ಟ್ ಕ್ಲಾಸ್ * ವಿನೂತನ ಪ್ರಯೋಗಗಳ ಮೂಲಕ ಪ್ರಗತಿ>

ಸಂದೀಪ್ ಸಾಲ್ಯಾನ್ ಬಂಟ್ವಾಳ

ಗುಣಮಟ್ಟದ ಕಲಿಕೆಗೆ ಪ್ರತಿ ತರಗತಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವಿದ್ಯಾರ್ಥಿಗಳು ಹಾಗೂ ಶಾಲೆ ಸುರಕ್ಷತೆಗಾಗಿ ಪ್ರತಿ ಕೊಠಡಿ ಹಾಗೂ ಶಾಲಾ ಆವರಣದಲ್ಲಿ ಸಿಸಿಟಿವಿ ಕಣ್ಗಾವಲು, ಆದಾಯ ನೀಡುವ ಸೋಲಾರ್ ವ್ಯವಸ್ಥೆ, ಶಾಲಾ ಅಂಗಣದಲ್ಲಿ ಹೂವಿನ ಗಿಡ, ಹಸಿರು ಉದ್ಯಾನದ ಅಲಂಕಾರ, ಹಣ್ಣು ಹಂಪಲಿನ ತೋಟದ ಚಿತ್ತಾರ…

ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಸಮಗ್ರ ಅಭಿವೃದ್ಧಿ ಸಾಧಿಸಿ ವಿನೂತನ ಪ್ರಯೋಗಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆಯ ಚಿತ್ರಣವಿದು.

ಶಿಸ್ತಿನ ವಿದ್ಯಾರ್ಥಿಗಳು, ಶಿಕ್ಷಕರ ನಿರಂತರ ಪರಿಶ್ರಮ, ಶಾಲಾಭಿವೃದ್ಧಿ ಸಮಿತಿ ಸಹಕಾರ, ಪಾಲಕರ ಬೆಂಬಲವಿದ್ದರೆ ಸರ್ಕಾರಿ ಶಾಲೆಯನ್ನೂ ಮಾದರಿ ಶಾಲೆಯಾಗಿ ರೂಪಿಸಲು ಸಾಧ್ಯವಿದೆ ಎಂಬುದಕ್ಕೆ ಈ ಪ್ರೌಢಶಾಲೆ ನಿದರ್ಶನ. ಇಲ್ಲಿನ ಉಪಪ್ರಾಂಶುಪಾಲ ರಮಾನಂದ ಅವರ ಮುತುವರ್ಜಿಯಲ್ಲಿ ನಾಲ್ಕೈದು ವರ್ಷಗಳಿಂದ ಎಲ್ಲ ಮೂಲಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಸೌಕರ್ಯಗಳನ್ನು ಒದಗಿಸಲಾಗಿದೆ.

ಸಿಸಿಟಿವಿ ಕಣ್ಗಾವಲು: ಪ್ರತಿ ತರಗತಿ ಕೋಣೆಗಳಿಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಗುಣಮಟ್ಟದ ಸಿಸಿಟಿವಿಗಳು ಇದಾಗಿವೆ. ಶಾಲೆ ಹೊರ ಆವರಣವೂ ಸಿಸಿಟಿವಿಯ ಕಣ್ಗಾವಲಿನಲ್ಲಿದೆ. ಶಾಲಾ ಆವರಣದಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಒಣ ಹಾಗೂ ಜೈವಿಕ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇ ಮಾಡಲಾಗುತ್ತಿದೆ. ಶಾಲಾ ಆವರಣದಲ್ಲಿ ಕಸ ಬೀಳದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಗಾರ್ಡನ್‌ನಲ್ಲಿ ಗಣಿತಾಕೃತಿಗಳು: ಶಾಲೆಯ ಹೊರ ಆವರಣದಲ್ಲಿ ಹಸಿರು ಹುಲ್ಲುಗಳಿಂದ ಗಮನ ಸೆಳೆಯುವ ಆಕರ್ಷಕ ಗಾರ್ಡನ್ ನಿರ್ಮಿಸಲಾಗಿದೆ. ಗಣಿತ ಆಕೃತಿಗಳಾದ ವೃತ್ತ, ಆಯತ, ಚೌಕ, ಷಟ್ಕೋನ ಮೊದಲಾದ ರಚನೆ ನಿರ್ಮಿಸಲಾಗಿದ್ದು, ಅದರಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ದಾಸವಾಳ, ಗುಲಾಬಿ, ಸದಾಪುಷ್ಪ, ಬಿಳಿ ಕೇಪುಳ, ಕಳ್ಳಿಗಿಡ ಮೊದಲಾದ ಹೂವಿನ ಗಿಡಗಳು ಶಾಲೆಯ ಹೊರಾಂಗಣದ ಅಂದ ಹೆಚ್ಚಿಸಿವೆ. ಶಾಲೆ ಹಿಂಭಾಗ ಹಾಗೂ ಸುತ್ತಮುತ್ತ ಹಣ್ಣಿನ ಗಿಡ ನೆಡಲಾಗಿದೆ. ಮಾವು, ಪೇರಳೆ, ಪುನರ್‌ಪುಳಿ, ರಂಬೂಟ, ಸಪೋಟ, ಮೂಸಂಬಿ, ಕಿತ್ತಳೆ, ಬಟರ್ ಫ್ರೂಟ್, ಚೈನೀಸ್ ಆರೆಂಜ್ ಮೊದಲಾದ ಹಣ್ಣಿನ ಗಿಡಗಳು ತೋಟದಲ್ಲಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿ ಇಲ್ಲಿಯೇ ಬೆಳೆಯಲಾಗುತ್ತದೆ.

ನೈಜ ದೃಶ್ಯ ಮೂಲಕ ಪಾಠ: ಸ್ಮಾರ್ಟ್ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಎಲ್ಲ ತರಗತಿಯಲ್ಲೂ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ. ಬಂಟ್ವಾಳ ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಈ ಯೋಜನೆ ಅನುಷ್ಠಾನಗೊಂಡಿದ್ದು, ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಪ್ರಯೋಜನಕಾರಿಯಾಗಿದೆ. ಎಲ್ಲ ವಿಷಯಗಳಿಗೂ ಸಂಬಂಧಿಸಿದ ಪಾಠಗಳನ್ನು ಸ್ಮಾರ್ಟ್ ಕ್ಲಾಸ್‌ನಲ್ಲಿ ನೀಡಲಾಗುತ್ತದೆ. ನೈಜ ದೃಶ್ಯಗಳ ಮೂಲಕ ವಿದ್ಯಾರ್ಥಿಗೆ ಮನದಟ್ಟಾಗುವ ರೀತಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಟಿ.ವಿ. ಮೂಲಕ ಪಾಠ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಎಲ್ಲ ತರಗತಿ ಕೊಠಡಿಯಲ್ಲೂ ಸ್ಮಾರ್ಟ್ ಕ್ಲಾಸ್ ಹೊಂದಿರುವ ಏಕೈಕ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೂ ಈ ಶಾಲೆ ಪಾತ್ರವಾಗಿದೆ.

ಸೋಲಾರ್‌ನಿಂದ ಆದಾಯ ಗಳಿಕೆ: ಶಾಲೆಯಲ್ಲಿ ಎರಡು ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಒಂದು ಶಾಲೆಗೆ ವಿದ್ಯುತ್ ಪೂರೈಸಿದರೆ ಇನ್ನೊಂದು ಪ್ಯಾನಲ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ತಿಂಗಳು ಸರಾಸರಿ 400 ಯುನಿಟ್ ವಿದ್ಯುತ್ ಹೊರ ಹರಿವಿದ್ದು, ಅಂದಾಜು ಒಂದು ಸಾವಿರ ರೂ. ಆದಾಯ ಶಾಲಾಭಿವೃದ್ಧಿ ಸಮಿತಿ ಖಾತೆಯಲ್ಲಿ ಜಮಾ ಆಗುತ್ತಿದೆ. ಶಾಸಕ ರಾಜೇಶ್ ನಾಕ್ ಅನುದಾನದಡಿ ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಇದಲ್ಲದೆಯೂ ಬಾವಿ ಹಾಗೂ ಪಂಚಾಯಿತಿಯ ನಳ್ಳಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಂತ್ರಿಕ ತರಬೇತಿ: ಎನ್‌ಎಸ್‌ಕ್ಯುಎಫ್ ಯೋಜನೆಯಡಿ ಶಾಲೆಯ ಒಂಬತ್ತನೆ ತರಗತಿ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಹಾಗೂ ಆರೋಗ್ಯ, ಸೌಂದರ್ಯ ಬಗ್ಗೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ತೃತೀಯ ಭಾಷೆಗೆ ಪರ್ಯಾಯವಾಗಿ ಈ ತರಬೇತಿ ಆಯ್ಕೆ ಮಾಡಿಕೊಳ್ಳಬಹುದು. ವಾಹನಗಳ ನಿರ್ವಹಣೆ, ಸರ್ವೀಸ್, ಆರೋಗ್ಯ, ಸ್ವಚ್ಛತೆ ಬಗ್ಗೆ ತರಬೇತಿ ಪಡೆದು ಭವಿಷ್ಯದಲ್ಲಿ ಸ್ವ ಉದ್ಯೋಗ ಪಡೆಯಲು ಇದು ದಾರಿದೀಪವಾಗಲಿದೆ.

ಶಿಸ್ತಿನ ವಿದ್ಯಾರ್ಥಿಗಳು: ವಿದ್ಯಾರ್ಥಿಗಳ ಶಿಸ್ತು ಶಾಲೆ ಒಟ್ಟಂದಕ್ಕೆ ಗರಿ ಇಟ್ಟಂತಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಪೂರಕವಾಗಿ ಇಂಟರಾಕ್ಟ್ ಕ್ಲಬ್, ಮತ ಕ್ಲಬ್, ಪ್ರೇರಣಾ ಕ್ಲಬ್, ಗಣಿತ ಕ್ಲಬ್ ಮತ್ತಿತರ ಕ್ಲಬ್‌ಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುದ್ದೇನಹಳ್ಳಿಯ ಸತ್ಯಸಾಯಿ ಸೇವಾ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ನೀಡಲಾಗುತ್ತಿದೆ. ಶಾಲೆ ಪ್ರಗತಿ ಗುರುತಿಸಿ ಕಳೆದೆರಡು ವರ್ಷಗಳಿಂದ ಪರಿಸರ ಮಿತ್ರ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ, ಜಿಲ್ಲಾ ಇಂಟರಾಕ್ಟ್ ಅವಾರ್ಡ್, ಗೋಲ್ಡನ್ ಗ್ಲೋಬ್ ಅವಾರ್ಡ್, ಐಡಿಯಲ್ ಸ್ಕೂಲ್ ಅವಾಡ್ ಪ್ರಶಸ್ತಿಗಳು ಲಭಿಸಿವೆ.

ಶಿಕ್ಷಕರ ಸಹಕಾರದಿಂದ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸೌಲಭ್ಯ ಒದಗಿಸಿ ಕೊಡಬೇಕೆನ್ನುವುದು ನಮ್ಮ ಕನಸು. ಈ ನಿಟ್ಟಿನಲ್ಲಿ ಇನಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಲೆಯಲ್ಲಿ ಕೈಗೊಳ್ಳಲಾಗುವುದು.
ರಮಾನಂದ
ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ