ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಭಕ್ತರು ಆತಂಕ ಪಡುವುದು ಬೇಡ ಎಂದ್ರು ಡಿಸಿಎಂ ಜಿ. ಪರಮೇಶ್ವರ್​

ತುಮಕೂರು: ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ನಮ್ಮ ಬಳಿ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ಹೇಳಿದರು.

ನಿನ್ನೆ ಸಂಜೆ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ಅವರು ಮಾತನಾಡಿ, ಶ್ರೀಗಳು ಆರೋಗ್ಯವಾಗಿದ್ದಾರೆ. ಭಕ್ತರು ಆತಂಕಪಡುವುದು ಬೇಡ. ಅವರಿಗೆ ಮುಂದೇನಾದರೂ ಚಿಕಿತ್ಸೆ ಅಗತ್ಯವಿದೆ ಎಂದಾದರೆ ವೈದ್ಯರು ತಿಳಿಸುತ್ತಾರೆ. ಅವರ ಆರೋಗ್ಯದ ವರದಿಯನ್ನು ಚೆನ್ನೈ ವೈದ್ಯರಿಗೆ ತೋರಿಸಲು ತೆಗೆದುಕೊಂಡು ಹೋಗಲಾಗಿದೆ. ಅವರು ಸಲಹೆ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಪೂಜೆ ಮಾಡಿದ ಶ್ರೀಗಳು
ನಿನ್ನೆ ಸಂಜೆ ಸುಸ್ತುಗೊಂಡಿದ್ದ ಶ್ರೀಗಳು ಇಂದು ಮುಂಜಾನೆ ಚೇತರಿಸಿಕೊಂಡಿದ್ದು, ಎಂದಿನಂತೆ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ಶಿವಪೂಜೆಯನ್ನೂ ನೆರವೇರಿಸಿದ್ದಾರೆ. ಭಕ್ತರು ಆತಂಕ ಪಡುವುದು ಬೇಡ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ತಿಳಿಸಿದರು.