ಪ್ರತಿಯೊಬ್ಬರ ಅಂತರಂಗದಲ್ಲಿ ಸಿದ್ಧಗಂಗಾಶ್ರೀ ನೆಲೆ

ಚಾಮರಾಜನಗರ: ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರು ಪ್ರತಿಯೊಬ್ಬರ ಅಂತರಂಗದಲ್ಲಿಯೂ ನೆಲೆಸಿದ್ದಾರೆ ಎಂದು ಕನಕಪುರ ದೇಗುಲಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮೀಜಿ ಸ್ಮರಿಸಿದರು.

ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳು ಜ್ಞಾನ ಹಾಗೂ ಅನ್ನದಾಸೋಹಕ್ಕೆ ಮಹತ್ವ ನೀಡಿದ್ದರು. ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವುದು ಶ್ರೀಗಳ ಆಶಯವಾಗಿತ್ತು. ಶ್ರೀಗಳು ಎಲ್ಲರ ಮನದಲ್ಲಿದ್ದು, ಯುಗಪುರುಷರಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.

ಡಾ.ಶಿವಕುಮಾರಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ 150ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದರು. ತಮ್ಮ ಜೀವಿತ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಅನ್ನ ನೀಡಿ ಅವರ ಬದುಕನ್ನು ಹಸನುಗೊಳಿಸಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ದೈವ ಮಾನವರಾಗಿದ್ದರು. ಸಹಸ್ರಾರು ಮಕ್ಕಳಿಗೆ ವಿದ್ಯೆ, ಊಟವನ್ನು ನೀಡಿದ ಮಹಾನ್ ಪುರುಷ. ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡುವ ಮೂಲಕ ತಂದೆ ತಾಯಂದಿರನ್ನು ಗೌರವಿಸಬೇಕು. ಎಲ್ಲರೂ ಶ್ರೀಗಳ ಹಾದಿಯಲ್ಲಿ ನಡೆಯಬೇಕು ಎಂದರು.

ಮರಿಯಾಲ ಮುರುಘಾರಾಜೇಂದ್ರಮಠದ ಇಮ್ಮಡಿಮುರುಘಾರಾಜೇಂದ್ರಸ್ವಾಮೀಜಿ ಮಾತನಾಡಿದರು. ದೇವನೂರು ಮಠದ ಮಹಾಂತಸ್ವಾಮೀಜಿ, ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣಸ್ವಾಮೀಜಿ, ಮುಡುಕನಪುರ ಹಲವಾರು ಮಠದ ಷಡಕ್ಷರಿ ದೇಶೀಕೇಂದ್ರಸ್ವಾಮೀಜಿ, ಹಂಡರಕಳ್ಳಿ ಸೂರ್ಯಸಿಂಹಾಸನ ಮಠದ ಪಂಚಾಕ್ಷರಿಸ್ವಾಮೀಜಿ, ಅರಕಲವಾಡಿಮಠದ ಬಸವಣ್ಣಸ್ವಾಮೀಜಿ, ಕೊತ್ತಲವಾಡಿಮಠದ ಗುರುಸ್ವಾಮೀಜಿ, ಕುದೇರು ಮಠದ ನಟರಾಜಸ್ವಾಮೀಜಿ, ಸೋಮವಾರಪೇಟೆಮಠದ ಕಾಲಾಗ್ನಿರುದ್ರಮುನಿಸ್ವಾಮೀಜಿ ಇತರರಿದ್ದರು.

ಶ್ರೀಗಳ ಭಾವಚಿತ್ರ ಮೆರವಣಿಗೆ: ಡಾ.ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನಲೆಯಲ್ಲಿ ಆಯೋಜಿಸಿದ್ದ ನಗರದ ಪ್ರವಾಸಿಮಂದಿರದ ಬಳಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರ ಮೆರವಣಿಗೆಗೆ ಸೋಮಹಳ್ಳಿ ವೀರಸಿಂಹಾಸನ ಶಿಲಾಮಠದ ಸಿದ್ದಮಲ್ಲಪ್ಪಸ್ವಾಮೀಜಿ ಚಾಲನೆ ನೀಡಿದರು.
ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಸಿದ್ದಮಲ್ಲೇಶ್ವರ ವಿರಕ್ತಮಠದ ಆವರಣದಲ್ಲಿ ಮೆರವಣಿಗೆ ಅಂತ್ಯಗೊಂಡಿತು. ನಂದಿಧ್ವಜ, ವೀರಗಾಸೆ, ಗೊರವರ ಕುಣಿತ, ಭಜನೆ ಎಲ್ಲರನ್ನು ಆಕರ್ಷಿಸಿದವು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ತಾಪಂ ಸದಸ್ಯ ದಯಾನಿಧಿ, ನಂದಿ ಭವನದ ಪ್ರಸಾದ್, ನಿಜಗುಣ ರಾಜು, ಕೆಲ್ಲಂಬಳ್ಳಿ ಸೋಮನಾಯಕ, ರವಿಕುಮಾರ್, ಮೂಡ್ಲುಪುರ ನಂದೀಶ್ ಇತರರಿದ್ದರು.