More

    ಬೆಳವಣಿಗೆಗೆ ಆವಿಷ್ಕಾರ ಪೂರಕವಾಗಿರಲಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ವಿಜ್ಞಾನದ ಆವಿಷ್ಕಾರಗಳು ಮನುಷ್ಯ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಶ್ರೀಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಗಂಗಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ 2019-20 ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು. ವಿಜ್ಞಾನ ಎಂಬುದು ಸತ್ಯದ ಅನ್ವೇಷಣೆಯಾಗಿದ್ದು, ವಿಜ್ಞಾನದ ಆವಿಷ್ಕಾರಗಳು ಮನುಷ್ಯನ ಯೋಗಕ್ಷೇಮಕ್ಕೆ ಅನುಗುಣವಾಗಿರಬೇಕು, ವಿಜ್ಞಾನದ ಆವಿಷ್ಕಾರಗಳಿಂದ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯ ಸೋಮಾರಿತನ ಬೆಳೆಸಿಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾನೆ ಎಂದರು.

    ಮಕ್ಕಳಲ್ಲಿ ಶಾಸ್ತ್ರೀಯ ವಿಜ್ಣಾನ ಅಭ್ಯಸಿಸುವ ಗುಣ ಬೆಳೆಸಬೇಕು. ಮಕ್ಕಳಲ್ಲಿ ಉತ್ತಮ ವಿಜ್ಞಾನಿಯಾಗಬೇಕು ಎಂಬ ಆಸೆ ಕುಂದುತ್ತಿದೆ. ಆದ್ದರಿಂದ ಶಿಕ್ಷಕರು, ಪಾಲಕರು ವಿಜ್ಞಾನಿಯಾಗುವ ಆಸಕ್ತಿಯ ಬೀಜವನ್ನು ಮಕ್ಕಳ ಮನಸ್ಸಲ್ಲಿ ಬಿತ್ತಬೇಕು ಎಂದರು.

    ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ವಸ್ತು ಪ್ರದರ್ಶನದಲ್ಲಿ ಮಕ್ಕಳ ಶ್ರಮ ಅತ್ಯುನ್ನತವಾಗಿದೆ. ಶಿಕ್ಷಕರು, ಪಾಲಕರು ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಯ ಮಕ್ಕಳು ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಸರ್ಕಾರಿ ಶಾಲೆಯ ಮಕ್ಕಳು ವಿಜ್ಞಾನ ಅಭ್ಯಸಿಸಲು ಹಿಂಜರಿಯುತ್ತಿದ್ದಾರೆ ಎಂದರು. ಜಿಪಂ ಉಪಾಧ್ಯಕ್ಷೆ ಶಾರದಾ, ಜಿಪಂ ಸದಸ್ಯ ನರಸಿಂಹಮೂರ್ತಿ, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಷಣ್ಮುಕಯ್ಯ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್ ಇದ್ದರು.

    ಪ್ರದರ್ಶನದಲ್ಲಿ ಏನೇನಿತ್ತು ?: ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನಾನಾ ಶಾಲಾ ವಿದ್ಯಾರ್ಥಿಗಳಿಂದಾಗಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಗಮನ ಸೆಳೆಯಿತು. ಸುಸ್ಥಿರ ಕೃಷಿ ಪದ್ಧತಿ, ಭವಿಷ್ಯದಲ್ಲಿ ಸಾರಿಗೆ ಮತ್ತು ಸಂಪರ್ಕ, ಭವಿಷ್ಯದ ಸಾರಿಗೆ ಮತ್ತು ಸಂವಹನ, ಕೈಗಾರಿಕಾ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗಣಿತದ ಮಾದರಿಗಳು, ಸೋಲಾರ್ ಆಧಾರಿತ ಬಸ್, ಏರ್ ಪೊರ್ಟ್, ಮೆಟ್ರೋರೈಲು, ಸ್ಮಾರ್ಟ್ ಸಿಟಿ, ಸಮರ್ಥನೀಯ ಕೃಷಿ ಆಚರಣೆ ಪ್ರದರ್ಶನಗಳು ಆಕರ್ಷಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts