ಸಿದ್ಧಗಂಗಾ ಶ್ರೀ ಆರೋಗ್ಯ ಸುಧಾರಣೆ

ತುಮಕೂರು: ವೈದ್ಯರೂ ಅಚ್ಚರಿ ಪಡುವಂತೆ ಸ್ವಾಮೀಜಿ ಆರೋಗ್ಯ ಸುಧಾರಣೆಯಾಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿಗಳ ಸೇವೆ ನಾಡಿಗೆ ಮತ್ತಷ್ಟು ಸಿಗಲಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಶ್ರೀಗಳು ಸಹಜವಾಗಿ ಉಸಿರಾಡುತ್ತಿದ್ದಾರೆ. ಶ್ರೀಗಳು ಮಾಡಿದ ಪುಣ್ಯ ಕೆಲಸಗಳು ಅವರಿಗೆ ಶಕ್ತಿ ನೀಡಿದೆ. ಮಠದಲ್ಲಿ ದೈವಿಕ ಶಕ್ತಿ ಇರುವುದರಿಂದ ಆರೋಗ್ಯ ಸುಧಾರಿಸಿದೆ. ಈ ಬಗ್ಗೆ ಭಕ್ತರು ಆತಂಕ ಪಡಬೇಕಿಲ್ಲ ಎಂದರು. ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಳೇ ಮಠದ ಹಿಂಬಾಗಿಲಿನ ಕಿಟಕಿಯಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಶಿವಕುಮಾರ ಸ್ವಾಮೀಜಿ ಇಚ್ಛಾಮರಣಿ. ಅವರು ಯಾವಾಗ ಅಪೇಕ್ಷೆ ಪಡುತ್ತಾರೋ ಆಗ ದೇವರು ಅವಕಾಶ ಕಲ್ಪಿಸಬಹುದು. ನಾಡಿಗೆ ಅವರ ಸೇವೆ ಪರಿಗಣಿಸಿ ಭಾರತ ಸರ್ಕಾರವು ಭಾರತರತ್ನ ಗೌರವ ನೀಡಬೇಕು. ಇದು ಅವರ ಸಮಾಜ ಸೇವೆಗೆ ಸಿಗಬೇಕಾದ ಗೌರವ.

| ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು

12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡುವಂತೆ ಅಂದಿನ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಮನವಿ ಮಾಡಿದ್ದೆ. ಸಾಧನೆ ಆಧಾರದ ಮೇಲೆ ಅರ್ಹವಾಗಿಯೇ ಭಾರತರತ್ನ ಸಿಗಬೇಕು. ಅನಿವಾರ್ಯವಾದರೆ ಮತ್ತೊಮ್ಮೆ ಮನವಿ ಮಾಡುತ್ತೇನೆ.

| ಎಚ್.ಡಿ.ಕುಮಾರಸ್ವಾಮಿ ಸಿಎಂ

ಹಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ. ಸಂಪ್ರದಾಯದಂತೆ ಅವರ ಪಕ್ಕದಲ್ಲಿಯೇ ಕುಳಿತು ಪೂಜಿಸಲಾಗುತ್ತಿದೆ. ಪೂಜ್ಯರ ವಿಲ್​ಪವರ್ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ವೈದ್ಯಕೀಯ ಲೋಕದ ವಿಸ್ಮಯ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ನಮ್ಮೆಲ್ಲರ ಅಪೇಕ್ಷೆಯಂತೆ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಣ್ಣು ಬಿಟ್ಟು, ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ.

| ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ