ಮಕ್ಕಳ ಭೋಜನದ ಬಳಿಕ ಸಾವಿನ ಸುದ್ದಿ ತಿಳಿಸಿ ಎಂದಿದ್ದರಂತೆ ಸಿದ್ಧಗಂಗಾ ಶ್ರೀಗಳು

ತುಮಕೂರು: ‘ಮಕ್ಕಳ ಭೋಜನದ ಬಳಿಕವಷ್ಟೇ ನಮ್ಮ ಸಾವಿನ ಸಂಗತಿ ತಿಳಿಸಿ’ ಹೀಗೆಂದು ಕಿರಿಯ ಶ್ರೀಗಳ ಬಳಿ ತಮ್ಮ ಕೊನೇ ಆಸೆಯನ್ನು ಹೇಳಿಕೊಂಡಿದ್ದರಂತೆ ಶ್ರೀ ಸಿದ್ಧಗಂಗಾ ಸ್ವಾಮೀಜಿಗಳು.

ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳನ್ನು ಸಲುಹಿದವರು. ಅವರು ದೇವರಾಗಿದ್ದರು, ತಾಯಿಯಾಗಿದ್ದರು. ತಮ್ಮ ಅಂತಿಮ ಘಳಿಗೆಯಲ್ಲೂ ಮಕ್ಕಳ ಬಗ್ಗೆಯೇ ಯೋಚಿಸಿದರು. ಅವರು ಸಿದ್ಧಪುರುಷರು. ತಮ್ಮಅಂತ್ಯಗಳಿಗೆ ಸಮೀಪಿಸುತ್ತಿರುವುದು ತಿಳಿದಿತ್ತು ಎನ್ನಿಸುತ್ತದೆ. ಅದಾಗಲೇ ಕಿರಿಯ ಶ್ರೀಗಳನ್ನು ಕರೆದು, ನಾವು ಯಾವಾಗ ಲಿಂಗೈಕ್ಯರಾದರೂ ಸರಿ ಆ ವಿಷಯವನ್ನು ಮಕ್ಕಳ ಭೋಜನವಾದ ಬಳಿಕವಷ್ಟೇ ತಿಳಿಸಬೇಕು ಎಂದಿದ್ದರಂತೆ. ಹಾಗಾಗಿಯೇ ಶ್ರೀಗಳು ಇಂದು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದರೂ 2 ಗಂಟೆ ನಂತರವೇ ಅದನ್ನು ಬಹಿರಂಗಪಡಿಸಿದ್ದು ಎನ್ನಲಾಗುತ್ತಿದೆ.

ಈಗ ಅದೇ ಮಕ್ಕಳು ತಮ್ಮ ದೇವರಿಗಾಗಿ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ತಮ್ಮ ಅಂತ್ಯ ಸಮೀಪಿಸುತ್ತಿದ್ದರೂ ಮತ್ತೊಬ್ಬರ ಹಸಿವಿನ ಬಗ್ಗೆ ಯೋಚನೆ ಮಾಡಿದ ಶ್ರೀಗಳು ನಿಜಕ್ಕೂ ದೇವರೇ ಆಗಿದ್ದಾರೆ. ನಾಳೆ ಸಂಜೆ 4 ಗಂಟೆಯಿಂದ ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನಗಳು ನಡೆಯಲಿವೆ.