ವೀರಾಪುರದ ವೀರಪುತ್ರ ಯತಿ ಪರಂಪರೆಯ ವೀರಾಗ್ರಣಿ

ತುಮಕೂರು: ನಡೆದಾಡುತ್ತಿದ್ದ ದೇವರು, ಕಾಯಕ ಯೋಗಿ ಹಾಗೂ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿ ಇನ್ನು ನೆನಪು ಮಾತ್ರ. ಜೀವನದ ಉದ್ದಕ್ಕೂ ಪರೋಪಕಾರಿಯಾಗಿ ಬದುಕಿದ ಶ್ರೀಗಳ ಸೇವೆ ಅನನ್ಯವಾಗಿದೆ. ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆ ಶ್ರಮಿಸಿದ ಶ್ರೀಗಳ ಜೀವನ ಹಾದಿ ಜಗತ್ತಿಗೆ ಮಾದರಿಯಾಗಿದೆ.

ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಏಪ್ರಿಲ್ 1, 1907ರಲ್ಲಿ ಶಿವಣ್ಣನಾಗಿ ಜನಿಸಿದರು. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶ್ರೀಗಳ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ಬಳಿಕ ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. 1927-30ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದರು.

ಮಠಾಧಿಪತಿಯಾಗಿ ಶ್ರೀಗಳು
1930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದ ನಂತರ ಉದ್ಧಾನ ಶ್ರೀಗಳು ಎಲ್ಲರ ಸಮ್ಮುಖದಲ್ಲಿ ಶ್ರೀಗಳನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾರೆ. ಕ್ರಿ.ಶ.1930 ರಿಂದ ಇಂದಿನವರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಸಮಾಜದ ಕಲ್ಯಾಣಕ್ಕಾಗಿ, ಬಸವಾದಿ ಪ್ರಥಮರ ನಡೆನುಡಿಗಳ ಪಥದಲ್ಲಿ, ಶರಣ ತತ್ತ್ವಗಳ ಪ್ರಸಾರದಲ್ಲಿ ಸತತ 88 ವರ್ಷಗಳ ಅಖಂಡಸೇವೆ ಸಲ್ಲಿಸುತ್ತಾ, ವಿಶ್ವದ ಗಮನ ಸೆಳೆದವರು ಶ್ರೀ ಶಿವಕುಮಾರ ಸ್ವಾಮೀಜಿ. ಶ್ರೀಮಠದಲ್ಲಿ ಲಿಂಗಪೂಜೆ, ಜಂಗಮದಾಸೋಹ, ಶರಣತತ್ತ್ವ ಕ್ರಿಯಾನುಷ್ಠಾನ ಸೇವಾನಿರತರಾದ ಶ್ರೀಗಳು ಸಿದ್ಧಗಂಗಾ ಮಠವನ್ನು ವಿದ್ಯಾದಾನ ಮತ್ತು ಜಂಗಮ ಕ್ಷೇತ್ರವಾಗಿ ಮುನ್ನಡೆಸಿದ್ದಾರೆ.

ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನ
ಪ್ರತಿದಿನವೂ ಶ್ರೀಗಳು ಮುಂಜಾನೆ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ದೂರದಿಂದ ಸ್ವಾಮಿಗಳ ದರ್ಶನಕ್ಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು.

ತ್ರಿವಿಧ ದಾಸೋಹ
ಸಿದ್ಧಗಂಗೆಯಲ್ಲಿ ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಶಿಕ್ಷಣ ಜ್ಯೋತಿ ಇಂದಿಗೂ ನಿರಂತರವಾಗಿ ಬೆಳಗುತ್ತಲೇ ಇದೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮಹಾವೃಕ್ಷವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೂ ಶೈಕ್ಷಣಿಕ ಸೇವೆ ಕವಲೊಡೆದಿದೆ. ಮಠದಲ್ಲಿ ಎಲ್ಲ ಜಾತಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ಮಠದ ಮಕ್ಕಳಿಗೆ ಮಾತೃಪ್ರೀತಿ ತೋರುವ ಶ್ರೀಗಳು ಶಿಕ್ಷಣದ ಜತೆಗೆ ಸಂಸ್ಕೃತ, ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾರೆ. 130 ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆಯನ್ನೇ ನಿರ್ವಿುಸಿದ್ದಾರೆ.

ಶ್ರೀಗಳ ಆಹಾರ ಪದ್ಧತಿ
ಒಂದು ಅಕ್ಕಿ ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ಸಿಹಿ ಹಾಗೂ ಖಾರ ಚಟ್ನಿ. ಎರಡು ತುಂಡು ಸೇಬು. ಇದಾದ ಬಳಿಕ ಒಂದು ಲೋಟ ಬೇವಿನ ಚಕ್ಕೆ ಕಷಾಯ. ಶ್ರೀಗಳು ಸೇವಿಸುತ್ತಿದ್ದ ಆಹಾರ. ಇನ್ನು ಶ್ರೀಗಳ ಪ್ರಸಾದ ತಯಾರು ಮಾಡುವ ಅಡುಗೆ ಕೊಠಡಿಯೊಳಗೆ ಅಡುಗೆ ಮಾಡುವವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ.

ಸ್ವಾಮೀಜಿ ಸ್ನಾನಕ್ಕೂ ಪದ್ಧತಿ
ಭಕ್ತರ ಮನೆಗೆ ಪಾದಪೂಜೆ ಸೇರಿದಂತೆ ಆಶೀರ್ವಚನ ನೀಡಲು ಮಠದಿಂದ ಹೊರಗೆ ತೆರಳುತ್ತಿದ್ದ ಶ್ರೀಗಳಿಗೆ ಅವರು ಬರುವುದರೊಳಗಾಗಿ ಸ್ನಾನಕ್ಕೆ ರೆಡಿ ಮಾಡಲಾಗುತ್ತಿತ್ತು. ಅದು ಶ್ರೀಗಳ ನಿಯಮದಂತೆಯೇ ನಡೆಯಬೇಕಿತ್ತು. ಅವರು ಸ್ನಾನಕ್ಕೆ ಬಳಸುತ್ತಿದ್ದ ನೀರಿನ ಬಾವಿ ಹತ್ತಿರ ಯಾರೂ ಹೋಗುವಂತಿರಲಿಲ್ಲ.

ಮುಂಜಾನೆ, ಸಂಜೆಯ ಪ್ರಾರ್ಥನೆ
ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದು ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ.

ನಿತ್ಯ ವಿದ್ಯಾರ್ಥಿ
ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧ ತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು.

ಪ್ರಶಸ್ತಿಗಳು ಮತ್ತು ಸನ್ಮಾನಗಳು
ಸ್ವಾಮೀಜಿಯವರ ಜಾತ್ಯತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪೂಜ್ಯ ಸ್ವಾಮೀಜಿಯವರ 100 ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.