More

    ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

    ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ಸಿದ್ಧಗಂಗಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಥಮ ಸ್ಮರಣೋತ್ಸವದಲ್ಲಿ ಮಾತನಾಡಿ, ಸ್ವಾಮೀಜಿ ಸಾವಿರಾರು ಜನರಿಗೆ ನೀಡಿದ ಪ್ರಸಾದ ಹೊಟ್ಟೆ ತುಂಬಿಸಿಕೊಳ್ಳಲಷ್ಟೇ ಸೀಮಿತವಾಗಲಿಲ್ಲ, ಜೀವನ ರೂಪಿಸಿಕೊಳ್ಳುವ ಪಾಠವಾಗಿ ಪ್ರಸಾದ ನೀಡಿದರು ಎಂದರು.

    ಡಾ.ಶಿವಕುಮಾರ ಸ್ವಾಮೀಜಿ ಆಧುನಿಕ ವಿಷಯ ಒಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆ ಹೊಂದಿದ್ದರು. ದೇಶದ ಅಭಿವೃದ್ಧಿಯ ಕನಸು ಕಂಡಿದ್ದವರು, ರಾಷ್ಟ್ರ ಭಕ್ತಿಯನ್ನು ಜನರಿಗೆ ಬಿತ್ತಿದವರು ಎಂದರು. ಕಾವಿಯನ್ನು ಲಾಂಛನವಾಗಿಸಿಕೊಂಡು ಮಾದರಿಯಾಗಿದ್ದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ಬಣ್ಣಿಸಿದರು.

    ಸ್ವಾಮೀಜಿ ಬದುಕಿದ್ದ 112 ವರ್ಷದಲ್ಲಿ ಯಾವ ಕ್ಷಣವನ್ನೂ ಲೋಪವಾಗಲು ಬಿಟ್ಟಿಲ್ಲ, ಗಂಧದ ಕೊರಡಿನಂತೆ ಜೀವನ ಸವೆಸಿ ನಾಡಿಗೆ ಮಾರ್ಗದರ್ಶನ ನೀಡಿದರು. ಗಡಿಯಾರದಂತೆ ಜೀವನಕ್ರಮ ಇಟ್ಟುಕೊಂಡಿದ್ದವರು ಮಠದ ಅಧಿಪತಿಗಳಾಗಿ, ಪರಂಪರೆಗೆ ಕೀರ್ತಿಪ್ರಾಯರಾಗಿದ್ದರು ಎಂದರು.

    ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸ್ವಾಮೀಜಿ ನಮ್ಮಿಂದ ದೂರವಾಗಿಲ್ಲ, ನಮ್ಮೆಲ್ಲ ಒಳ್ಳೆಯ ಕೆಲಸಕ್ಕೆ ಅವರ ಆಶೀರ್ವಾದ ಇರುತ್ತದೆ. ಶ್ರೀಗಳ ಬಗ್ಗೆ ಜನರಿಗೆ ಅಪಾರ ಪ್ರೀತಿ ಇತ್ತು, ಅವರು ಕಷ್ಟ, ಕಾರ್ಪಣ್ಯಗಳನ್ನು ಅನುಭವಿಸಿ ಜ್ಞಾನಿಯಾಗಿದ್ದರು. ಅವರು ಅನುಭವಿಸಿದ ನೋವು ಲಕ್ಷಾಂತರ ಬಡ ಮಕ್ಕಳ ನೋವನ್ನು ಸ್ವಲ್ಪಮಟ್ಟಿಗೆ ನಿವಾರಿಸಲು ಸಾಧ್ಯವಾಗಿಸಿತು. ಸ್ವಾಮೀಜಿ ಹೆಸರಿನಲ್ಲಿ ತುಮಕೂರು ಜಿಲ್ಲೆ ಇತ್ತು, ಇಂದು ಅವರ ನೆನಪಿನಲ್ಲಿ ಮುಂದಿನ ಶತಮಾನ ಕಳೆಯಬೇಕು, ದೇಶದೆಲ್ಲೆಡೆ ಕಾಯಕಯೋಗಿಯ ಗುಣಗಾನ ನಡೆಯುತ್ತಿದೆ ಎಂದರು. ಅಶಕ್ತರ ಪರವಾಗಿಯೇ ಜೀವನ ಕಳೆದ ಸ್ವಾಮೀಜಿ ಜನರ ಪ್ರೀತಿ ಗಳಿಸಿಕೊಂಡಿದ್ದು ಮತ್ಯಾರಿಗೂ ಅಂತಹ ಸಾಧನೆ ಮಾಡಲು ಸಾಧ್ಯವಿಲ್ಲ. ಸಿದ್ಧಗಂಗಾ ಮಠದ ಸಂಸ್ಕಾರ ಮಕ್ಕಳ ವ್ಯಕ್ತಿತ್ವ ರೂಪಿಸುತ್ತಿದೆ ಎಂದರು.

    ಸಚಿವ ಸಿ.ಟಿ.ರವಿ ಮಾತನಾಡಿ, ಬಸವಣ್ಣನವರ ಸಾಮಾಜಿಕ ಆಂದೋಲನ ನಿಜ ಧರ್ಮ ತಿಳಿಸಿಕೊಟ್ಟಿತ್ತು, ಸಾಮಾಜಿಕ ಮಾರ್ಪಾಡು ಆಗಿತ್ತು, ಇದರ ಪುನರುತ್ಥಾನದ ಕಾರ್ಯ ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಮುಂದುವರಿಸಿದರು ಎಂದರು. ದೇವರು ಹೇಗೆ ಇರುತ್ತದೆ ಎಂಬುದಕ್ಕೆ ಸ್ವಾಮೀಜಿ ನಮ್ಮ ನಡುವೆಯೇ ಇದ್ದರು. ಅವರ ಕಾಲಘಟ್ಟದಲ್ಲಿ ನಾವಿದ್ದೆವು ಎಂಬುದು ಪುಣ್ಯ. ಜಾತಿ, ಧರ್ಮದ ಬೇಧ ಮಾಡಲು ನಮ್ಮ ನಿಜ ಧರ್ಮ ಹೇಳಿಕೊಟ್ಟಿಲ್ಲ, ಜಾತಿಯಿಂದ ದೈವತ್ವ ಸಿಕ್ಕ ಇತಿಹಾಸವಿಲ್ಲ ಎಂದರು. ಡಾ.ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠಕ್ಕಷ್ಟೇ ಪೀಠಾಧಿಪತಿ ಆಗಿರಲಿಲ್ಲ, ಅವರು ಜನರ ಮನಸ್ಸಿನಲ್ಲಿಯೇ ಸಿಂಹಾಸನಧೀಶರಾಗಿದ್ದರು ಎಂದು ಸ್ಮರಿಸಿದರು.

    ಬೆಂಗಳೂರು ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ ಆಶೀರ್ವಚನ ನೀಡಿದರು. ಸಚಿವ ವಿ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬೆಮೆಲ್ ಕಾಂತರಾಜು, ಕೆ.ಗೋಪಾಲಯ್ಯ, ಎಸ್.ಟಿ.ಸೋಮ ಶೇಖರ್, ಮೇಯರ್ ಲಲಿತಾ ಮತ್ತಿತರರು ಇದ್ದರು.

    ಮಠದ ಎಲ್ಲ ಕಲ್ಲುಗಳಿಗೂ ಪೂಜ್ಯರ ಸ್ಪರ್ಶ: ಮಠದ ಎಲ್ಲ ಕಲ್ಲುಗಳಿಗೂ ಪರಮಪೂಜ್ಯರ ಸ್ಪರ್ಶವಾಗಿದೆ, ಮಠದ ಎಲ್ಲ ಕೆಲಸದಲ್ಲಿಯೂ ಶ್ರೀಗಳು ಭಾಗಿಯಾಗಿದ್ದಾರೆ, ಕಾಯಕವೇ ಕೈಲಾಸ ಎಂಬ ಮಾತು ಇಲ್ಲಿ ಸಾಕಾರವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವುಕರಾದ ಅವರು, ಸ್ವಾಮೀಜಿ ಅವರ ಸುದೀರ್ಘ ಆಯಸ್ಸಿನ ಗುಟ್ಟು ಇಷ್ಟಲಿಂಗಪೂಜೆ, ಅದೆಂತಹುದೇ ಸಂದರ್ಭದಲ್ಲಿಯೂ ಲಿಂಗ ಪೂಜಾ ತಪಸ್ಸು ತಪ್ಪಿಸಿದವರಲ್ಲ, ಅವರ ದಾಸೋಹ ನಿಷ್ಠೆ ನಮಗೆಲ್ಲಾ ಮಾದರಿ, ಸರಳ ಜೀವನ, ನಿಸ್ವಾರ್ಥ ಮನೋಭಾವ ಅನುಕರಣೀಯ ಎಂದರು. ಮಠದಲ್ಲಿ ಗ್ರಾಮೀಣ ಭಾಗದ 10000ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದ್ದರೆ ಶಿವಕುಮಾರಸ್ವಾಮೀಜಿ ಅವರ ದೂರದೃಷ್ಟಿ ಕಾರಣ. ಸರ್ಕಾರದ ಸೌಲಭ್ಯಗಳಿಲ್ಲದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕ್ರಾಂತಿ ಮಾಡಿದರು ಎಂದು ಸ್ಮರಿಸಿಕೊಂಡರು. ಮಕ್ಕಳಿಗೆ ಅಗತ್ಯವಾಗಿದ್ದ ಗ್ರಂಥಾಲಯ, ವಿದ್ಯಾರ್ಥಿನಿಲಯ ಸ್ಥಾಪನೆಯ ನೆಪವಾಗಿಟ್ಟುಕೊಂಡು ಸ್ವಾಮೀಜಿ ಅವರನ್ನು ಒಪ್ಪಿಸಿ ಅವರ ಸುವರ್ಣ ಮಹೋತ್ಸವ, ವಜ್ರಮಹೋತ್ಸವ ನಡೆಸಿದ್ದೇವೆ, ಅವರೆಂದೂ ಆಚರಣೆ ಬಯಸಿದವರಲ್ಲ ಎಂದರು. ಮಾರ್ಕಾಂಡ ನಿಲಯದ ಮೂಲೆಯ ಕೊಠಡಿಯಲ್ಲಿ ಬಹುವರ್ಷ ಕಳೆದರು. ಸುಖ, ಸೌಲಭ್ಯ ಬಯಸದೇ ನಾಡಿನ ಹಿತ ಬಯಸಿದವರು, ಅವರ ಕಾಯಕನಿಷ್ಠೆ ಊಹೆಗೂ ನಿಲುಕುವುದಿಲ್ಲ, ಕಾವಿಗೆ ಗೌರವ ತರುವ ನಿಟ್ಟಿನಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಜೀವನ ಕ್ರಮವಿತ್ತು, ಹೇಳುವುದನ್ನು ಮಾತಿನ ಮೂಲಕ ಹೇಳಿದವರಲ್ಲ, ವರ್ತನೆಯ ಮೂಲಕವೇ ಹೇಳಿದ್ದು ಸ್ವಾಮೀಜಿ ಹೆಗ್ಗಳಿಕೆ ಎಂದರು. ದೇಶದ ಪ್ರಧಾನ ಮಂತ್ರಿ ಆಹ್ವಾನವಿಲ್ಲದೆಯೂ ಮಠಕ್ಕೆ ಬರುತ್ತಾರೆ ಎಂದಾದರೆ ಅದು ಡಾ.ಶಿವಕುಮಾರ ಸ್ವಾಮೀಜಿ ಅವರ ಶಕ್ತಿಯೇ ಕಾರಣ. ಅವರು ಜನರ ಹೃದಯರತ್ನ ಎಂದರು.

    ಶ್ರೀಗಳಲ್ಲಿ ದೇವರ ಕಂಡಿದ್ದೇನೆ. ದೇವರನ್ನು ನಾನು ನೋಡಿಲ್ಲ. ಆದರೂ ದೇವರಿದ್ದಾನೆ ಎಂದು ಪ್ರತಿ ದಿನ ಪೂಜಿಸುತ್ತೇವೆ. ಆದರೆ, ನನ್ನ ನಿಜ ಜೀವನದಲ್ಲಿ ಶಿವಕುಮಾರ ಸ್ವಾಮೀಜಿಯವರಲ್ಲಿ ದೇವರನ್ನು ಕಂಡುಕೊಂಡಿದ್ದೇನೆ ಎಂದು ನವದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷ ಮಣೀಂದರ್‌ಜೀತ್ ಸಿಂಗ್ ಬಿಟ್ಟಾ ಹೇಳಿದರು. ಸಮಾರಂಭದಲ್ಲಿ ಮಠದ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ಮಾತೃಭೂಮಿ ರಕ್ಷಣೆಗಾಗಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ನನ್ನ ಅಳಿಲು ಸೇವೆ ಸಲ್ಲಿಸಲು ಸ್ವಾಮೀಜಿ ಅವರು ನೀಡಿರುವ ಮಾರ್ಗದರ್ಶನ ಸದಾ ನನ್ನೊಂದಿಗೆ ಇರುತ್ತದೆ ಎಂದರು. ತುಮಕೂರಿನ ಹೆಸರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆಯಲು ಪರಮಪೂಜ್ಯರು ಕಾರಣ. ಶ್ರೀಗಳಲ್ಲಿ ನಾಣು ದೇವರನ್ನು ಕಂಡಿದ್ದೇನೆ. ಶ್ರೀಮಠಕ್ಕೆ ನಾನೆಂದೂ ಋಣಿಯಾಗಿರುವೆ ಎಂದು ಸನ್ಮಾನಿತ ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್ ಗರ್ಗ್ ಹೇಳಿದರು. ಬಿಜಿಎಸ್ ಆಸ್ಪತ್ರೆ ಚೇರ್ಮನ್ ಡಾ.ರವೀಂದ್ರನಾಥ್ ಅವರನ್ನೂ ಮಠದ ವತಿಯಿಂದ ಸನ್ಮಾನಿಸಲಾಯಿತು.

    14 ಅಡಿ ಎತ್ತರದ ಶ್ರೀಗಳ ಪುತ್ಥಳಿ ಅನಾವರಣ: 16 ಕೋಟಿ ರೂಪಾಯಿ ವೆಚ್ಚದಲ್ಲಿ 14 ಅಡಿ ಎತ್ತರದ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಮುಂದಿನ ತಿಂಗಳು ಸಿಎಂ ಯಡಿಯೂರಪ್ಪ ಅನಾವರಣಗೊಳಿಸುವರು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಪ್ರಜಾಪ್ರಭುತ್ವದ, ರಾಜಪ್ರಭುತ್ವದ ಆಡಳಿತವನ್ನು ಕಂಡಿರುವ ಶ್ರೀಗಳು, ಹಳ್ಳಿಹಳ್ಳಿಗೆ ಜೋಳಿಗೆ ಹಿಡಿದು ಹೋಗಿ ಭಿಕ್ಷಾಟನೆ ಮಾಡಿ ಶ್ರೀಮಠವನ್ನು ಕಟ್ಟಿ ಬೆಳೆಸಿದರು. ಇಡೀ ಬದುಕನ್ನು ಸೇವೆಗೆ ಅರ್ಪಿಸಿಕೊಂಡು ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ನೀಡುವಂತೆ ಈ ವೇದಿಕೆ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

    ಭವ್ಯ ಮೆರವಣಿಗೆಗೆ ಕಲಾತಂಡಗಳ ಸಾಥ್: ರುದ್ರಾಕ್ಷಿ ಮಂಟಪದ ರಥದಲ್ಲಿ ಡಾ.ಶಿವಕುಮಾರಸ್ವಾಮೀಜಿ ಭಾವಚಿತ್ರವಿಟ್ಟು ನಡೆಸಿದ ಭವ್ಯ ಮೆರವಣಿಗೆಗೆ ಜನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಕಳೆ ತಂದರು. ಗದ್ದುಗೆಯಿಂದ ಆರಂಭವಾದ ಮೆರವಣಿಗೆ ರೈಲ್ವೆ ನಿಲ್ದಾಣದವರೆಗೂ ಸಾಗಿ ನಂತರ ಗುದ್ದುಗೆಗೆ ವಾಪಸಾಯಿತು. ವೀರಗಾಸೆ, ನಂದಿದ್ವಜ ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯ ಮುಂದೆ ಸಾಗಿದರು. ಡಾ.ಶಿವಕುಮಾರಸ್ವಾಮೀಜಿ ಅವರ ಸಾವಿರಾರು ಭಕ್ತರು ಸ್ವಾಮೀಜಿ ಸ್ಮರಿಸುತ್ತ ಹೆಜ್ಜೆಹಾಕಿದರು.

    ಭವಿಷ್ಯದ ನಾಯಕ ವಿಜಯೇಂದ್ರ : ನಾಡಿನ ಭವಿಷ್ಯದ ನಾಯಕನಾಗಿ ಬಿ.ವೈ.ವಿಜಯೇಂದ್ರ ಹೊರಹೊಮ್ಮವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು. ಸಿಎಂ ಯಡಿಯೂರಪ್ಪ ಅವರು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್‌ಗೆ ತೆರಳಿದ್ದು, ದೈಹಿಕವಾಗಿ ಅವರು ಅಲ್ಲಿದ್ದರೂ, ಮಾನಸಿಕವಾಗಿ ಇಲ್ಲಿದ್ದಾರೆ. ಅವರ ಅನುಪಸ್ಥಿತಿಯ ಸ್ಥಾನವನ್ನು ಪುತ್ರ ವಿಜಯೇಂದ್ರ ತುಂಬಿದ್ದು, ಅವರಿಗೆ ಭವಿಷ್ಯದ ನಾಯಕನಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.

    50 ಕೆಜಿ ಬೆಳ್ಳಿ ಪುತ್ಥಳಿ ಕೊಡುಗೆ: ಪುಣ್ಯ ಸ್ಮರಣೆ ಅಂಗವಾಗಿ ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್‌ಗರ್ಗ್ ಅವರು ಪೂಜ್ಯರು ಕುಳಿತ ಭಂಗಿಯಲ್ಲಿರುವ 3 ಅಡಿ ಎತ್ತರದ 50 ಕೆಜಿ ಬೆಳ್ಳಿ ಪುತ್ಥಳಿಯನ್ನು ಮಠಕ್ಕೆ ಕೊಡುಗೆಯಾಗಿ ನೀಡಿದರು. ಮುಂಬೈನಲ್ಲಿ ತಯಾರಿಸಲಾಗಿದ್ದು ಪುತ್ಥಳಿ ಶನಿವಾರ ರಾತ್ರಿಯೇ ಮಠಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಭಾನುವಾರ ಪುಣ್ಯಸಂಸ್ಮರಣೋತ್ಸವ ಸಮಾರಂಭದ ವೇದಿಕೆಯಲ್ಲಿ ಪುತ್ಥಳಿ ಇಡುವ ನಿರೀಕ್ಷೆ ಇತ್ತು. ಕಾರಣಾಂತರದಿಂದ ಪುತ್ಥಳಿ ಮಠ ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಹಳೆಯ ಮಠದ ಶ್ರೀಗಳು ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಸದ್ಯ ದರ್ಶನಕ್ಕೆ ಇಡಲಾಗಿದೆ. ನಂತರ ಅದನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts