ನಡೆದಾಡುತ್ತಿದ್ದ ದೇವರು ಶಿವೈಕ್ಯ

ತುಮಕೂರು: ನಡೆದಾಡುವ ದೇವರು, ಅಕ್ಷರ ದಾಸೋಹಿ ಪರಮಪೂಜ್ಯ ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಬೆಳಗ್ಗೆ 11. 44 ಗಂಟೆಗೆ ಶಿವೈಕ್ಯರಾಗಿದ್ದಾರೆ.

ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಸಿದ್ಧಗಂಗಾ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹುದೂರಕ್ಕೆ ಒಯ್ದಿದೆ.

ಪಿತ್ತಕೋಶದಲ್ಲಿನ ಸೋಂಕಿನ ಕಾರಣಕ್ಕೆ ಒಂದೂವರೆ ತಿಂಗಳ ಹಿಂದಷ್ಟೇ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳು ಚಿಕಿತ್ಸೆ ಪಡೆದು ಬಂದಿದ್ದರು. ಆದರೆ, ಅಂದಿನಿಂದಲೂ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿತ್ತು. ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದ್ದರಿಂದ ಉಸಿರಾಟದ ತೀವ್ರ ತೊಂದರೆ ಅನುಭವಿಸುತ್ತಿದ್ದ ಸ್ವಾಮೀಜಿ ಅವರಿಗೆ, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆ ಇಲ್ಲದೆ ಸ್ವಾಮೀಜಿಗಳು ಸ್ವತಃ ಉಸಿರಾಟ ಮಾಡುತ್ತಿದ್ದದ್ದು ಕೇವಲ ಕೆಲವು ಗಂಟೆಗಳು ಮಾತ್ರ. ಇದರೊಂದಿಗೆ, ಕಳೆದ ಕೆಲ ದಿನಗಳಿಂದೀಚೆಗೆ ಅವರ ಉದರ ಭಾಗದಲ್ಲಿಯೂ ನೀರು ಸೇರಲಾರಂಭಿಸಿತ್ತು. ಅಲ್ಲದೇ, ದೇಹದಲ್ಲಿ ನೈಸರ್ಗಿಕವಾಗಿ ಪ್ರೋಟೀನ್​ ಉತ್ಪತ್ತಿಯಾಗದಿರುವುದೂ ತೀವ್ರ ಸಮಸ್ಯೆಯುಂಟು ಮಾಡಿತ್ತು.

ಒಂದೂವರೆ ತಿಂಗಳಿನಿಂದಲೂ ಅನಾರೋಗ್ಯದೊಂದಿಗೆ ತೀವ್ರ ಹೋರಾಟವನ್ನೇ ಮಾಡುತ್ತಾ ಬಂದಿದ್ದ ಸ್ವಾಮೀಜಿಗಳ ಅಗಲಿಕೆಯ ಸುದ್ದಿ ಇಂದು ಹೊರಬಿದ್ದಿದೆ. ನಡೆದಾಡುತ್ತಿದ್ದ ದೇವರು ಈ ದಿನ ಶಿವೈಕ್ಯರಾಗಿದ್ದಾರೆ.

One Reply to “ನಡೆದಾಡುತ್ತಿದ್ದ ದೇವರು ಶಿವೈಕ್ಯ”

Comments are closed.