ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಸ್ಥಿತಿ ಗಂಭೀರ: ವೈದ್ಯರ ಹೇಳಿಕೆ

ತುಮಕೂರು: ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಭಾನುವಾರ ರಾತ್ರಿಯಿಂದ ಏರುಪೇರುಗಳಾಗುತ್ತಿದ್ದು, ಸದ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರನ್ನು ಆರೈಕೆ ಮಾಡುತ್ತಿರುವ ಡಾ. ಪರಮೇಶ್​ ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯದ ಕುರಿತು ಭಾನುವಾರ ರಾತ್ರಿಯಿಂದ ಗೊಂದಲವೇರ್ಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಪರಮೇಶ್​, ” ಶ್ರೀಗಳ ಆರೋಗ್ಯದಲ್ಲಿ ನಿನ್ನೆ ರಾತ್ರಿಯಿಂದ ಏರುಪೇರುಗಳಾಗುತ್ತಿವೆ. ಅವರ ಶ್ವಾಸಕೋಶ, ರಕ್ತದೊತ್ತಡ, ಉಸಿರಾಟದಲ್ಲಿ ತೊಂದರೆಗಳಾಗುತ್ತಿವೆ.

ಪರಿಸ್ಥಿತಿ ಈಗಲೂ ಹಾಗೆಯೇ ಮುಂದುವರಿದಿದೆ. ಸಮಸ್ಯೆ ಸರಿಪಡಿಸಲು ನಾವೂ ಕೂಡ ಶತ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ಯಶಸ್ವಿಯಾಗುತ್ತೇವೋ ಗೊತ್ತಿಲ್ಲ,”ಎಂದು ಅವರು ಹೇಳಿದರು.

” ಶ್ರೀಗಳ ದೇಹದಲ್ಲಿ ಪ್ರೋಟೀನ್​ ಉತ್ಪತ್ತಿಯಾಗುತ್ತಿಲ್ಲ. ಇದರಿಂದ ಬಹಳ ಸಮಸ್ಯೆಯಾಗಿದೆ. ಪರಿಸ್ಥಿತಿ ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ನೀಡಲಾಗಿರುವ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿದಿದೆ. ಇನ್ನೊಂದು ಗಂಟೆಯಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು,” ಎಂದು ಅವರು ತಿಳಿಸಿದರು.