ಸಿದ್ಧಗಂಗಾ ಶ್ರೀ ಚೆನ್ನೈನಲ್ಲಿ ಕ್ಷೇಮ

ತುಮಕೂರು: ವೈದ್ಯರ ಸಲಹೆ ನಿಮಿತ್ತ ಶುಕ್ರವಾರ ಏರ್ ಆಂಬುಲೆನ್ಸ್ ಮೂಲಕ ಚೆನ್ನೈನ ಡಾ. ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ಗೆ ತೆರಳಿ ದಾಖಲಾಗಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಶನಿವಾರ ಬೆಳಗ್ಗೆ 8 ಗಂಟೆಗೆ ಪಿತ್ತನಾಳ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಚೆನ್ನೈನ ಅಂತಾರಾಷ್ಟ್ರೀಯ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾದ ಶ್ರೀಗಳಿಗೆ ರಕ್ತ ಪರೀಕ್ಷೆ, ಇಸಿಜಿ, ಎಕ್ಸ್​ರೇ, ಕಾರ್ಡಿಯಾಲಜಿ, ಪಲ್ಮನರಿ ಸೇರಿ ವಿವಿಧ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆಗಳ ವರದಿ ಬಂದ ಬಳಿಕ ಸಂಜೆ ಅಂತಾರಾಷ್ಟ್ರೀಯ ಖ್ಯಾತ ಸರ್ಜನ್ ಡಾ. ಮೊಹಮ್ಮದ್ ರೇಲಾ ಅವರ ತಂಡ ಶ್ರೀಗಳನ್ನು ಭೇಟಿ ಮಾಡಿ ಶನಿವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ನಡೆಸಲು ನಿರ್ಧರಿಸಿತು. ರಾತ್ರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಡಾ.ರೇಲಾ ತಿಳಿಸಿದ್ದಾಗಿ ಶ್ರೀಗಳ ಜತೆ ತೆರಳಿರುವ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಪರಮೇಶ್ ದೂರವಾಣಿ ಮೂಲಕ ವಿಜಯವಾಣಿಗೆ ಮಾಹಿತಿ ನೀಡಿದರು.

ಇಷ್ಟಲಿಂಗ ಪೂಜೆ: ಸಿದ್ಧಗಂಗಾ ಶ್ರೀಗಳ ದೈನಂದಿನ ದಿನಚರಿಯಲ್ಲಿ ಕೊಂಚವೂ ವ್ಯತ್ಯಯ ಇರಲಿಲ್ಲ. ಮಧ್ಯಾಹ್ನ ಎಲ್ಲ ವೈದ್ಯಕೀಯ ಪರೀಕ್ಷೆಗಳಾದ ಬಳಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಳಿಕ ರಾತ್ರಿ 9ಕ್ಕೆ ಮತ್ತೆ ಸ್ನಾನ, ಪೂಜೆಯಲ್ಲಿ ಶ್ರೀಗಳು ತೊಡಗಿಕೊಂಡರು. ಶ್ರೀಗಳ ಜತೆ ಕಣ್ಣೂರು ಶ್ರೀಗಳು, ಬೆಟ್ಟದಹಳ್ಳಿ, ಗುರುವಣ್ಣದೇವರಮಠ, ಬಂಡೇಮಠ, ಬೇವೂರು ಶ್ರೀಗಳಿದ್ದಾರೆ.

ಭಕ್ತರ ಮನೆಯಿಂದ ಪ್ರಸಾದ: ಆಸ್ಪತ್ರೆ ಸಮೀಪ ಇರುವ ಶ್ರೀಮಠದ ಭಕ್ತರಾದ ಷಣ್ಮುಖಪ್ಪ ಎಂಬುವವರ ಮನೆಯಿಂದ ಮಧ್ಯಾಹ್ನ ಶ್ರೀಗಳಿಗೆ ಪ್ರಸಾದ ತರಲಾಗಿತ್ತು. ಇಡ್ಲಿ, ಗಂಜಿ, ಅನ್ನ-ಸಾರು, ಹಣ್ಣನ್ನು ಸಲ್ವಪ್ರಮಾಣದಲ್ಲಿ ಶ್ರೀಗಳು ಸೇವಿಸಿದರು.

ಶ್ರೀಮಠದಿಂದ ತೆರಳಿರುವ ಸಿಬ್ಬಂದಿ ವಾಸ್ತವ್ಯವಿರುವ ವೇಲ್ಸ್ ಇನ್ಸಿ್ಟಟ್ಯೂಟ್ ಆಫ್ ಸೈನ್ಸ್ ಟೆಕ್ನಾಲಜಿ ಆಂಡ್ ಅಡ್ವಾನ್ಸ್ಡ್ ಸ್ಟಡೀಸ್​ನ ಅತಿಥಿಗೃಹದಿಂದ ಪ್ರಸಾದ ತರಲಾಗಿದೆ.

ಈ ಹಿಂದೆ ಡಾ.ಮೊಹಮದ್ ರೇಲಾ ಶ್ರೀಮಠಕ್ಕೆ ಬಂದು ಶ್ರೀಗಳ ತಪಾಸಣೆ ಮಾಡಿದ್ದರು. ಈಗ ಸ್ಟೆಂಟ್​ಗಳನ್ನು ಪದೇಪದೆ ಬದಲಿಸಲು ಸಾಧ್ಯವಿಲ್ಲ. ಚೆನ್ನೈಗೆ ಶ್ರೀಗಳನ್ನು ಕರೆತನ್ನಿ ಸೂಕ್ತ ಚಿಕಿತ್ಸೆ ನೀಡೋಣ ಎಂದಿದ್ದಾರೆ. ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳು ಶ್ರೀಗಳ ಆರೋಗ್ಯ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನೀಡಿವೆ.

| ಡಾ.ಪರಮೇಶ್ ಎಂಡಿ ಸಿದ್ಧಗಂಗಾ ಆಸ್ಪತ್ರೆ

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಾಗಿದ್ದು, ಸರ್ಕಾರವೇ ಚಿಕಿತ್ಸೆ ಜವಾಬ್ದಾರಿ ವಹಿಸಿಕೊಳ್ಳಲಿದೆ.

| ಕುಮಾರಸ್ವಾಮಿ ಸಿಎಂ

Leave a Reply

Your email address will not be published. Required fields are marked *