ಸರಗೂರು: ಸಿಕ್ಕಲ್ ಸೆಲ್ ಅನಿಮಿಯ ಕಾಯಿಲೆ ಎಂಬುದು ಕುಡುಗೋಲು ಅಥವಾ ಕುಡ್ಲು ಕಾಯಿಲೆ ಎಂದು ಕರೆಯುತ್ತಾರೆ. ಈ ಕಾಯಿಲೆಯಲ್ಲಿ ಕೆಂಪು ರಕ್ತಕಣಗಳು ಕುಡುಗೋಲು ಆಕಾರಕ್ಕೆ ಪರಿವರ್ತನೆಗೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.
ತಾಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಕೆಬ್ಬೇಪುರ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಸಿಕ್ಕಲ್ ಸೆಲ್ ಅನಿಮಿಯ ತಪಾಸಣೆ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ಅನುವಂಶಿಕ ಕಾಯಿಲೆ. ಆದರೂ ಆರೋಗ್ಯವಂತ ಪಾಲಕರಿಗೆ ಸಿಕ್ಕಲ್ ಸೆಲ್ ಕಾಯಿಲೆ ಇರುವ ಮಕ್ಕಳು ಹುಟ್ಟಬಹುದು. ಪದೇ ಪದೆ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ಆಗಾಗ ಕಾಮಾಲೆ ರೋಗ ,ರಕ್ತಹೀನತೆ, ವಾಸಿಯಾಗದ ಹುಣ್ಣುಗಳು, ಪಾರ್ಶ್ವವಾಯು ಈ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಸಂಬಂಧಿಕರಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿಯಿಂದ ರಕ್ತ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಬಹುದು ಎಂದರು.
ಮಕ್ಕಳಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದೆ ಎಂದು ದೃಢಪಡಿಸಿದಲ್ಲಿ ಕೂಡಲೇ ಚಿಕಿತ್ಸೆ ಪಡೆದಲ್ಲಿ ಮಗು ಗುಣಮುಖವಾಗುವಂತೆ ಮಾಡಬಹುದು. ಕಾಯಿಲೆಗೆ ಚಿಕಿತ್ಸೆ ಪಡೆಯದೆ ಕಡೆಗಣಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು. ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಮತ್ತು ಆರೋಗ್ಯಕರ ಜೀವನ ಕಾಪಾಡಿಕೊಂಡಲ್ಲಿ ಕಾಯಿಲೆಯಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಸಿರಾಜ್ ಅಹಮದ್, ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜು, ರವಿರಾಜ್, ಕ್ಷಯ ರೋಗ ಮೇಲ್ವಿಚಾರಕರಾದ ಉಮೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅನಿತಾ, ಜಲಜಾ, ವತ್ಸಲಾ ಇತರರಿದ್ದರು.