ಅಕ್ರಮ ಮದ್ಯ ಮಾರಾಟ ಸ್ಥಗಿತಗೊಳಿಸಿ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಅವ್ಯಾಹತವಾಗಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸದಸ್ಯರು ವಿವಿಧ ಸಂಘಟನೆಗಳ ಜತೆಗೂಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಸಂಘಟನೆ ಅಧ್ಯಕ್ಷ ರಂಗೇಗೌಡ ಮಾತನಾಡಿ, ಬುಡಕಟ್ಟು ಜನಾಂಗ ವಾಸವಾಗಿರುವ ಬಿಳಿಗಿರಿರಂಗನಬೆಟ್ಟದ 8 ಪೋಡುಗಳಲ್ಲಿ ಅಕ್ರಮ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ತಿಂಗಳಿಂದ ಇಲ್ಲಿ ಮದ್ಯ ಸೇವನೆಯಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಹಲ್ಲೆ, ದೌರ್ಜನ್ಯಗಳೂ ನಡೆದಿವೆ. ಹೆಂಗಸರು, ಶಾಲಾ ವಿದ್ಯಾರ್ಥಿಗಳು ಇದರ ಚಟಕ್ಕೆ ಬಿದ್ದಿರುವುದು ಆತಂಕದ ವಿಷಯವಾಗಿದೆ ಎಂದು ದೂರಿದರು.

ಬೆಟ್ಟಕ್ಕೆ ಯಳಂದೂರು, ಚಾಮರಾಜನಗರದಲ್ಲಿ ಚೆಕ್‌ಪೋಸ್ಟ್‌ಗಳಿವೆ. ಇಲ್ಲಿಂದಲೇ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಇವರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಅಬಕಾರಿ ಇಲಾಖೆ ಈ ಕಡೆ ಸುಳಿಯುವುದಿಲ್ಲ. ಈ ಬಗ್ಗೆ ಈ ಹಿಂದೆ ಗ್ರಾಮದಲ್ಲಿ ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ದೂರು ಸಲ್ಲಿಸಿದ್ದರೂ ಪೊಲೀಸ್ ಇಲಾಖೆ ಕೆಲವರ ಮೇಲೆ ದೂರು ದಾಖಲಿಸಿದ್ದು ಬಿಟ್ಟರೆ ಇವರ ಮೇಲೆ ಸಣ್ಣಪುಟ್ಟ ದೂರು ದಾಖಲಿಸಿ ಬಿಡಲಾಗಿದೆ. ಆದರೆ ಮೇಲ್ಮಟ್ಟದಲ್ಲಿ ಇದರ ಸಂಪೂರ್ಣ ಕಡಿವಾಣಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ವಹಿಸದಿರುವುದು ಖಂಡನೀಯ ಎಂದರು.

ಬಿಳಿಗಿರಿರಂಗನಬೆಟ್ಟ ಪೌರಾಣಿಕ ಪ್ರಸಿದ್ಧ ಯಾತ್ರ ಸ್ಥಳವಾಗಿದೆ. ಮದ್ಯ ಮಾರಾಟ, ಸೇವನೆಯಿಂದ ಇಲ್ಲಿನ ಪಾವಿತ್ರ್ಯೆತೆಗೂ ಧಕ್ಕೆಯಾಗುತ್ತದೆ. ಇಲ್ಲಿಗ ಬರುವ ಪ್ರವಾಸಿಗರೂ ಅಲ್ಲಲ್ಲಿ ಮದ್ಯ ಸೇವನೆ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿಯೂ ಇಲಾಖೆಯ ಅಧಿಕಾರಿಗಳು ಸೋತಿದ್ದಾರೆ. ಕೂಡಲೇ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನಸೆಳೆದರು. ನಂತರ ಮನವಿ ಪತ್ರವನ್ನು ಪಿಡಿಒ ಬಿ.ಸ್ವಾಮಿ ಅವರಿಗೆ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೇತಮ್ಮ ಮುಖಂಡರಾದ ಬೇದೇಗೌಡ, ರಂಗೇಗೌಡ, ಶಿವಮಲ್ಲು, ಮಾದಪ್ಪ, ಮಾದೇಗೌಡ, ಬೊಮ್ಮಯ್ಯ, ಸ್ನೇಕ್‌ಸುಂದರ್, ಶ್ರೀನಿವಾಸ, ಸಿದ್ದೇಗೌಡ, ಮಹಾದೇವಮ್ಮ, ಗೀತಾ, ಮುತ್ತಮ್ಮ, ಬೇದಮ್ಮ ವಿವಿಧ ಮಹಿಳಾ ಸಂಘಗಳ ಸದಸ್ಯರು ಇತರರು ಇದ್ದರು.

 

Leave a Reply

Your email address will not be published. Required fields are marked *