ಬೆಂಗಳೂರು:
ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಯಾವುದೇ ಬಾಕಿಯನ್ನು ಉಳಿಸಿಕೊಳ್ಳದೆ ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಬೇಕು ಎನ್ನುವ ಸರ್ಕಾರದ ಸೂಚನೆಗೆ ಓಗೊಟ್ಟಿರುವ ಕಾರ್ಖಾನೆಗಳು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬಾಕಿ ಪಾವತಿ ಮಾಡಿವೆ.
ಬೆಳಗಾವಿ ಅಧಿವೇಶನ ನಡೆಯುವುದರೊಳಗಾಗಿ ಕಬ್ಬು ಬೆಳೆಗಾರರಿಗೆ ಪೂರ್ಣ ಬಾಕಿ ನೀಡಬೇಕು
ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ 19,865 ಕೋಟಿ ರೂ ಹಣವನ್ನು ಪಾವತಿ ಮಾಡಲಾಗಿದೆ.
ಸರ್ಕಾರಿ ಮತ್ತು ಸಹಕಾರಿ ವ್ಯವಸ್ಥೆಯಲ್ಲಿರುವ ಸಕ್ಕರೆ ಕಾರ್ಖಾನೆ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಒಟ್ಟು 76 ಕಾರ್ಖಾನೆಗಳಿಂದ ಪ್ರತಿ ವರ್ಷ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗುತ್ತದೆ. ಕಳೆದ ವರ್ಷ 6.60 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಇದರಿಂದ 55 ಸಾವಿರ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಅದರ ಹಿಂದಿನ ವರ್ಷ 6.33 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 53 ಸಾವಿರ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು.
ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಬ್ಬು ಬೆಳೆಗಾರರು ಬಂದು ಪ್ರತಿಭಟನೆ ಮಾಡುವುದಕ್ಕೆ ಅವಕಾಶ ನೀಡಬಾರದು. ಬಾಕಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಆಗಿಂದಾಗ್ಗೆ ಪ್ರತಿಭಟನೆಗಳು ನಡೆದಿರುವುದು ಹೊಸತೇನಲ್ಲ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಕ್ಕರೆ ಕಾರ್ಖಾನೆಗಳು ಸಹಕರಿಸಬೇಕು ಎನ್ನುವ ಮನವಿಗೆ ಎಲ್ಲಾ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಸಹಕರಿಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷ ಕಳೆದು ಮತ್ತೊಮ್ಮೆ ಕಬ್ಬು ಅರೆವಿಕೆಯನ್ನು ಕಾರ್ಖಾನೆ ಪ್ರಾರಂಭ ಮಾಡಿದರೂ, ಒಂದು ವರ್ಷದ ಬಾಕಿ ಹಾಗೆಯೇ ಉಳಿದಿರುತ್ತಿತ್ತು. ಆದರೆ, ಈ ಬಾರಿ ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಂಡಿದ್ದರಿಂದ ಎಲ್ಲವೂ ಸಾಧ್ಯವಾಗಿದೆ.
ಕೋರ್ಟ್ ಕಚೇರಿ ಎನ್ನುವ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಬಾಕಿ ಇದೆ. ಅದನ್ನು ಶೀಘ್ರವೇ ಇತ್ಯರ್ಥಪಡಿಸಿ ಹಣ ಪಾವತಿ ಮಾಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈ ಶುಗರ್‌ನಲ್ಲೂ ಶೇ.100 ಹಣ ಪಾವತಿ
ಮಹಾರಾಜರ ಕಾಲದಲ್ಲಿ ಪ್ರಾರಂಭ ಮಾಡಿದ್ದ ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಸದಾ ಒಂದಿಲ್ಲೊಂದು ಕಾರಣಕ್ಕೆ ನಷ್ಟದಲ್ಲಿಯೇ ನಡೆಯುತಿತ್ತು. ಈ ಬಾರಿ ಅಚ್ಚರಿ ಅಂದರೆ, ಈ ಕಾರ್ಖಾನೆಯೂ ಸಹ ರೈತರಿಗೆ ಶೇ.100ರಷ್ಟು ಹಣ ಪಾವತಿ ಮಾಡಿರುವುದು ವಿಶೇಷ.