ರಾಮನ ಅವತಾರಕ್ಕೆ ಶುಭ್ರಾ-ಚೈತ್ರಾ ಸೇರ್ಪಡೆ

ಬೆಂಗಳೂರು: ವಿನಯ್ ಪಂಪಾಪತಿ ಮತ್ತು ವಿಕಾಸ್ ಪಂಪಾಪತಿ ಜತೆಯಾಗಿ ನಿರ್ದೇಶಿಸುತ್ತಿರುವ ‘ರಾಮನ ಅವತಾರ’ ಚಿತ್ರದಲ್ಲಿ ಹಲವು ವಿಶೇಷಗಳಿವೆ. ಆ ಪೈಕಿ ಮೊದಲನೆಯದಾಗಿ ಗಮನ ಸೆಳೆಯುತ್ತಿರುವುದೇ ಬಹುತಾರಾಗಣ. ಈ ಚಿತ್ರಕ್ಕೆ ಮೂವರು ನಾಯಕರು. ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ, ದಾನಿಶ್ ಸೇಟ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ. ಪಾತ್ರಗಳನ್ನು ಪರಿಚಯಿಸುವ ಉದ್ದೇಶದಿಂದ ಬಹುದಿನಗಳ ಹಿಂದೆಯೇ ಚಿಕ್ಕದೊಂದು ಟೀಸರ್ ಬಿಡುಗಡೆ ಮಾಡಲಾಗಿತ್ತು. ನಂತರ ನಾಯಕಿ ಸ್ಥಾನಕ್ಕೆ ಪ್ರಣೀತಾ ಸುಭಾಷ್ ಆಗಮನವಾಗಿತ್ತು. ಈಗ ಕೇಳಿಬರುತ್ತಿರುವ ಹೊಸ ಸುದ್ದಿ ಏನೆಂದರೆ ಪಾತ್ರವರ್ಗವನ್ನು ಇನ್ನಷ್ಟು ಹಿಗ್ಗಿಸಿದ್ದಾರೆ ನಿರ್ದೇಶಕರು. ಚಿತ್ರತಂಡಕ್ಕೆ ಇನ್ನೂ ಇಬ್ಬರು ನಾಯಕಿಯರು ಎಂಟ್ರಿ ಪಡೆದಿದ್ದಾರೆ. ಮೂಲಗಳ ಪ್ರಕಾರ, ‘ವಜ್ರಕಾಯ’ ಖ್ಯಾತಿಯ ಶುಭ್ರ ಅಯ್ಯಪ್ಪ ಮತ್ತು ಚೈತ್ರಾ ಆಚಾರ್ ‘ರಾಮನ ಅವತಾರ’ ಬಳಗ ಸೇರಿಕೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ವಿಶೇಷ ಪಾತ್ರವರ್ಗವನ್ನು ಇಟ್ಟುಕೊಂಡು ನಿರ್ದೇಶಕರು ಯಾವ ರೀತಿ ಕಥೆ ಹೇಳಲಿದ್ದಾರೆ ಎಂಬ ಕೌತುಕ ಸೃಷ್ಟಿಯಾಗಿದೆ. 2015ರಲ್ಲಿ ತೆರೆಕಂಡ ‘ವಜ್ರಕಾಯ’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಜತೆ ತೆರೆಹಂಚಿಕೊಳ್ಳುವ ಮೂಲಕ ಶುಭ್ರ ಅಯ್ಯಪ್ಪ ಚಂದನವನಕ್ಕೆ ಕಾಲಿಟ್ಟಿದ್ದರು. ಆದರೆ ಆ ಬಳಿಕ ಅವರ ಯಾವ ಚಿತ್ರವೂ ಕನ್ನಡದಲ್ಲಿ ಬರಲೇ ಇಲ್ಲ. ಸುನಿ ನಿರ್ದೇಶನದ ‘ಜಾನ್ ಸೀನ’ ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ಶುಭ್ರ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಕೆಲಸಗಳು ತಡವಾಗಿವೆ. ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಶುಭ್ರ ಈಗ ‘ರಾಮನ ಅವತಾರ’ದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಮತ್ತೋರ್ವ ನಟಿ ಚೈತ್ರಾ ಆಚಾರ್ ಈಗಾಗಲೇ ‘ಮಹಿರ’ ಮತ್ತು ‘ಕ್ಯೂರಿಯಸ್ ಕೇಸಸ್ ಆಫ್ ಎದೆಬಡಿತ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆಯೇ ‘ರಾಮನ ಅವತಾರ’ ತಂಡದಿಂದ ಅವರಿಗೆ ಬುಲಾವ್ ಹೋಗಿದೆ ಎನ್ನಲಾಗಿದೆ. ಅಮ್ರೇಜ್ ಸೂರ್ಯವಂಶಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.