ನವದೆಹಲಿ: ಭಾರತ ತಂಡದ ಯುವ ಬ್ಯಾಟರ್ ಶುಭಮಾನ್ ಗಿಲ್ 2 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಪಂಜಾಬ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜನವರಿ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 6ನೇ ಸುತ್ತಿನ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಎದುರು ಆಡುವುದನ್ನು ಖಚಿತಪಡಿಸಿದ್ದಾರೆ. ಆದರೆ ಇನ್ನಷ್ಟೇ ಪಂಜಾಬ್ ತಂಡವನ್ನು ಅಧಿಕೃತವಾಗಿ ಹೆಸರಿಸಬೇಕಿದೆ.
ಏಷ್ಯಾದಿಂದ ಹೊರಗೆ ಆಡಿರುವ ಟೆಸ್ಟ್ ಪಂದ್ಯಗಳ 18 ಇನಿಂಗ್ಸ್‌ಗಳಲ್ಲಿ 17.64ರ ಸರಾಸರಿ ಮಾತ್ರ ಹೊಂದಿದ್ದಾರೆ. ಜತೆಗೆ ತಂಡದ ಸಂಯೋಜನೆಯ ದೃಷ್ಟಿಯಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿ ಅಂತಿಮ ಪಂದ್ಯದಲ್ಲೂ ಅವರನ್ನು ಕೈಬಿಡಲಾಗಿತ್ತು. ಜೂನ್‌ನಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ರಣಜಿ ಟೂರ್ನಿಯಲ್ಲಿ ಗಿಲ್ ಆಡಲಿದ್ದಾರೆ. ರಣಜಿ ಬಳಿಕ ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್ ನಿಗದಿಯಾಗಿರುವ ಹಿನ್ನಲೆ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಪೂರ್ವ ತಯಾರಿ ಇದಾಗಿದೆ.
ಅಭಿಷೇಕ್ ಶರ್ಮ, ಅರ್ಷದೀಪ್ ಸಿಂಗ್ ಗೈರಿನಲ್ಲಿ ಗಿಲ್ ಪಂಜಾಬ್‌ಗೆ ಪ್ರಮುಖ ಆಟಗಾರ ಎನಿಸಲಿದ್ದಾರೆ. ಜತೆಗೆ ರಣಜಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಮಾಜಿ ಆಟಗಾರ ವಾಸಿಂ ಜಾಫರ್ ಪಂಜಾಬ್ ಕೋಚ್ ಆಗಿರುವುದು ಗಿಲ್ ಕೆಲ ಸಲಹೆ ಪಡೆಯಲು ಸಹಾಯಕವಾಗಲಿದೆ ಎನ್ನಲಾಗಿದೆ.
2022ರಲ್ಲಿ ಆಲೂರಿನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಕೊನೆಯದಾಗಿ ಪಂಜಾಬ್ ಪರ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದರು.ಆಸ್ಟ್ರೇಲಿಯಾದಲ್ಲಿ 3-1ರಿಂದ ಸರಣಿ ಸೋಲಿನ ಬೆನ್ನಲ್ಲೇ ರಾಷ್ಟ್ರೀಯ ತಂಡದ ಆಟಗಾರರು ವಿರಾಮದ ವೇಳೆ ರಾಜ್ಯ ತಂಡ ಪ್ರತಿನಿಧಿಸುವುದು ಕಡ್ಡಾಯ ಎಂಬ ಸೂಚನೆ ನೀಡಲಾಗಿದೆ. ಗಿಲ್ ಅವರಿಗೆ ಕೋಚ್ ಗೌತಮ್ ಗಂಭಿರ್ ರಣಜಿ ಆಡುವಂತೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ರಣಜಿ ಟ್ರೋಫಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಏಕೈಕ ಗೆಲುವು ಸಾಧಿಸಿರುವ ಪಂಜಾಬ್ ಸಿ ಗುಂಪಿನ ಐದನೇ ಸ್ಥಾನದಲ್ಲಿದೆ.
ಮುಂಬೈ ತಂಡದೊಂದಿಗೆ ರೋಹಿತ್ ಅಭ್ಯಾಸ
ಕಳಪೆ ನಿರ್ವಹಣೆಯಿಂದ ನಾಯಕ ಸ್ಥಾನ ಕಳೆದುಕೊಳ್ಳುವುದರ ಜತೆಗೆ ವೃತ್ತಿಜೀವನ ಅಂತ್ಯದ ಭೀತಿಯಲ್ಲಿರುವ ರೋಹಿತ್ ಶರ್ಮ, ಮಂಗಳವಾರ ಮುಂಬೈ ರಣಜಿ ತಂಡದೊಂದಿಗೆ ವಾಂಖೆಡೆಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆಸೀಸ್ ವಿರುದ್ಧ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಿದ ಐದು ಇನಿಂಗ್ಸ್‌ಗಳಲ್ಲಿ ಕೇವಲ 31 ರನ್ ಕಲೆಹಾಕಿದ್ದ 37 ವರ್ಷದ ರೋಹಿತ್, ಮುಂಬೈ ತಂಡದೊಂದಿಗೆ ಎರಡು ಗಂಟೆ ಕಾಲ ಅಭ್ಯಾಸ ನಡೆಸಿದರು. ಜ.23ರಂದು ಜಮ್ಮು-ಕಾಶ್ಮೀರ ಎದುರು ಮುಂಬೈ ತಂಡ ರಣಜಿ ಪಂದ್ಯ ಆಡಲಿದ್ದು, ರೋಹಿತ್ ಕಣಕ್ಕಿಳಿಯುವರೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಕೋಚ್ ಓಂಕಾರ್ ಸಲ್ವಿ ಮಾರ್ಗದರ್ಶನದಲ್ಲಿ ಮುಂಬೈ ಅಭ್ಯಾಸ ಶಿಬಿರ ಆರಂಭಿಸಿದ್ದು, ರೋಹಿತ್ ಶರ್ಮ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ವಾರಾಂತ್ಯದಲ್ಲಿ ಮುಂಬೈ ತಂಡದ ಆಯ್ಕೆ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿವರೆಗೂ ರೋಹಿತ್ ರಾಷ್ಟ್ರೀಯ ತಂಡದ ಕರ್ತವ್ಯದಿಂದ ಹೊರಗುಳಿಯಲಿದ್ದು, ೆ.6ರಂದು ಮೂರು ಪಂದ್ಯಗಳ ಸರಣಿ ಆರಂಭವಾಗಲಿದೆ.
ದೆಹಲಿ ಸಂಭಾವ್ಯರಲ್ಲಿ ಕೊಹ್ಲಿ, ಪಂತ್
ನವದೆಹಲಿ: ಜನವರಿ 23ರಂದು ಆರಂಭವಾಗಲಿರುವ ಎರಡನೇ ಹಂತದ ರಣಜಿ ಟ್ರೋಫಿಗೆ ದೆಹಲಿ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) 41 ಆಟಗಾರರ ಸಂಭಾವ್ಯರ ತಂಡ ಪ್ರಕಟಿಸಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ವೇಗಿ ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ. ದೆಹಲಿ ತಂಡ ಜ.23ರಂದು ಸೌರಾಷ್ಟ್ರ ಎದುರು ಕಣಕ್ಕಿಳಿಯಲಿದೆ.
ಆದರೆ ಅಂತಾರಾಷ್ಟ್ರೀಯ ಆಟಗಾರರು ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿ ಇಲ್ಲದಿದ್ದಾಗ ರಾಜ್ಯ ತಂಡ ಪ್ರತಿನಿಧಿಸಲು ಅರ್ಹರಾಗಿರುತ್ತಾರೆ. ಅವರ ಲಭ್ಯತೆ ಆಧಾರದಲ್ಲಿ ಅವರನ್ನು ಅಂತಿಮ ತಂಡದ ಆಯ್ಕೆಗೆ ಪರಿಗಗಣಿಸಲಾಗುವುದು ಎಂದು ಡಿಡಿಸಿಎ ತಿಳಿಸಿದೆ. ಸದ್ಯ ಅಸ್ಥಿರ ಪ್ರದರ್ಶನದಿಂದ ಬಳಲುತ್ತಿರುವ ಕೊಹ್ಲಿ ದಶಕದ ಬಳಿಕ ದೇಶೀಯ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ದೆಹಲಿ ತಂಡ ಜ.23ರಂದು ಸೌರಾಷ್ಟ್ರ ಎದುರು ಕಣಕ್ಕಿಳಿಯಲಿದೆ.