ಅರ್ಜುನ್​ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ ವಿರುದ್ಧ ದೂರು ನೀಡಿದ ಶ್ರುತಿ ಹರಿಹರನ್​

ಬೆಂಗಳೂರು: ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ ವಿರುದ್ಧ ಶ್ರುತಿ ದೂರು ನೀಡಿದ್ದಾರೆ.

ಗುರುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದು, ಪ್ರಶಾಂತ್​ ಸಂಬರಗಿ ಜೀವ ಬೆದರಿಕೆ ಒಡ್ಡಿದ್ದಾರೆ ಮತ್ತು ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಶ್ರುತಿ ಹರಿಹರನ್​ ವಿರುದ್ಧ ಅರ್ಜುನ್​ ಸರ್ಜಾ ಈಗಾಗಲೇ ಕಾನೂನು ಸಮರ ಆರಂಭಿಸಿದ್ದು, ಸರ್ಜಾ ಅವರ ವ್ಯವಸ್ಥಾಪಕ ಶಿವಾರ್ಜುನ್, ಶ್ರುತಿ ವಿರುದ್ಧ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್​ಗೆ ದೂರು ನೀಡಿದ್ದರು. ಕಮಿಷನರ್ ಸೂಚನೆ ಮೇರೆಗೆ ಸೈಬರ್ ಕ್ರೈಂ ಠಾಣೆ ಪೊಲೀಸರು ಗುರುವಾರ ಶ್ರುತಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಮತ್ತೊಂದೆಡೆ ಮೇಯೊಹಾಲ್ ಕೋರ್ಟ್ ನಲ್ಲಿ ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಪೋಸ್ಟ್ ಮಾಡಿದ್ದು, ಕಕ್ಷಿದಾರರ ತೇಜೋವಧೆ ಆಗುತ್ತಿದೆ. ಇದಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಸರ್ಜಾ ಪರ ವಕೀಲ ಶ್ಯಾಮಸುಂದರ್ ಮನವಿ ಮಾಡಿದ್ದರು. ನ್ಯಾಯಾಲಯ ತಾತ್ಕಾಲಿಕ ತಡೆ ನೀಡುವ ಸಂಬಂಧ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ಕೋರ್ಟ್​ನಲ್ಲೇ ಮೀಟೂ ಫೈಟ್