ಶ್ರುತಿ ಹರಿಹರನ್​ ಪರ ನಿಂತಿರುವ ನಟ ಚೇತನ್​ ಅರ್ಜುನ್​ ಸರ್ಜಾ ವಿರುದ್ಧ ಧ್ವನಿಯೆತ್ತಿದ್ದೇಕೆ?

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಶ್ರುತಿ ಹರಿಹರನ್​ಗೆ ಸಾಥ್​ ನೀಡಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್​ ವಿರುದ್ಧವೂ ಆರೋಪ ಕೇಳಿಬಂದಿದೆ.

ಹೌದು, ಅರ್ಜುನ್​ ಸರ್ಜಾ ವಿರುದ್ಧವಾಗಿ ನಿಂತಿರುವ ಚೇತನ್​ ಪ್ರೇಮ ಬರಹ ಚಿತ್ರಕ್ಕಾಗಿ ಪಡೆದ 10 ಲಕ್ಷ ರೂ. ವಾಪಸ್​ ಕೊಡದೆ ಈ ರೀತಿ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅರ್ಜುನ್ ಸರ್ಜಾ ಆತ್ಮೀಯ ಸ್ನೇಹಿತ ‌ಪ್ರಶಾಂತ್ ಸಂಬರ್ಗಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ಹಂಚಿಕೊಂಡಿರುವ ಪ್ರಶಾಂತ್​, ಹತ್ತು ಲಕ್ಷ ದುಡ್ಡಿಗಾಗಿ ಚೇತನ್​ ಅರ್ಜುನ್ ಸರ್ಜಾ ವಿರುದ್ಧ ನಿಂತಿದ್ದಾರೆ. ಮೊದಲು ಅರ್ಜುನ್ ಸರ್ಜಾ ಪುತ್ರಿಯ ಪ್ರೇಮ ಬರಹ ಚಿತ್ರಕ್ಕೆ ಮೊದಲು ನಟ ಚೇತನ್ ಆಯ್ಕೆಯಾಗಿದ್ದರು. ಈ ವೇಳೆ ಮುಂಗಡವಾಗಿ ಚೇತನ್​ ಅವರು 10 ಲಕ್ಷ ಹಣ ಪಡೆದುಕೊಂಡಿದ್ದರು. ಆದರೆ, ವರ್ಕ್​ಶಾಪ್ ವೇಳೆ ಚೇತನ್ ಅವರ ನಟನೆಯನ್ನು ಸರ್ಜಾ ಹಾಗೂ ನಿರ್ದೇಶಕರ ತಂಡ ಒಪ್ಪಲಿಲ್ಲ. ಚಿತ್ರದಿಂದ ಕೈಬಿಡಬೇಕಾಯಿತು. ಈ ವೇಳೆ ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್​ ನೀಡುವಂತೆ ಅರ್ಜುನ್​ ಸರ್ಜಾ ಚೇತನ್​ಗೆ ನೋಟೀಸ್​ ನೀಡಿದ್ದರು ಎಂದಿದ್ದಾರೆ.

ಮುಂದುವರಿದು, ಪ್ರೇಮಬರಹ ಚಿತ್ರದಿಂದ ಔಟ್ ಆಗಿದ್ದ ಚೇತನ್, ಅರ್ಜುನ್ ಸರ್ಜಾ ಮೇಲೆ ಸಿಟ್ಟಾಗಿದ್ದರು. ಅಲ್ಲದೆ, ನೋಟಿಸ್ ನೀಡಿದರೂ ಹತ್ತು ಲಕ್ಷ ಅಡ್ವಾನ್ಸ್ ಹಣ ನೀಡದೆ, ನಿನ್ನ ನೋಡ್ಕೋತೀನಿ ಎಂದು ಅರ್ಜುನ್​ ಸರ್ಜಾಗೆ ಹೇಳಿದ್ದರು. ಇದೇ ಕಾರಣಕ್ಕಾಗಿ ಚೇತನ್ ಶ್ರುತಿ ಪರವಾಗಿ ನಿಂತು ಅರ್ಜುನ್ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)