ಸಾಕ್ಷ್ಯ ಇದೆ, ಈಗ್ಲೇ ಕೊಡಲ್ಲ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ ಅರ್ಜುನ್ ಸರ್ಜಾ ಬಗ್ಗೆ ಮೀ ಟೂ ಅಪವಾದ ಹೊರಿಸಿದ್ದ ನಟಿ ಶ್ರುತಿ ಹರಿಹರನ್, ಆರೋಪಕ್ಕೆ ಪೂರಕವಾಗಿ ಯಾವುದೇ ಸಾಕ್ಷ್ಯ ನೀಡಲು ನಿರಾಕರಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿ ನಡೆಸಿದ ಶ್ರುತಿ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದಕ್ಕೆ ಈಗಲೇ ಸಾರ್ವಜನಿಕವಾಗಿ ಸಾಕ್ಷಿ ನೀಡಿದರೆ ಕಾನೂನಿನ ತೊಡಕುಂಟಾಗಲಿದೆ. ಸಮಯ ಬಂದಾಗ ಪ್ರಸ್ತುತ ಪಡಿಸುತ್ತೇನೆ ಎಂದರು. ‘ವಿಸ್ಮಯ’ ಚಿತ್ರದ ಶೂಟಿಂಗ್ ವೇಳೆ ಲೈಂಗಿಕ ದೌರ್ಜನ್ಯ ನಡೆದಾಗ, ‘ನನಗೆ ಮಾತನಾಡುವ ಧೈರ್ಯ ಇರಲಿಲ್ಲ. ಆದರೀಗ ಮೀ ಟೂ ಅಭಿಯಾನದಿಂದಾಗಿ ಧೈರ್ಯ ಬಂದಿದೆ. ಹಾಗಾಗಿ ಎಲ್ಲವನ್ನೂ ಬಹಿರಂಗ ಪಡಿಸಿದ್ದೇನೆ’ ಎಂದು ಹೇಳಿದರು.

‘ಫೈರ್’ ಸಂಘಟನೆ ಬೆಂಬಲ: ಚಿತ್ರರಂಗದಲ್ಲಿ ಕೆಲಸ ಮಾಡುವವರ ಹಕ್ಕು ಮತ್ತು ಸಮಾನತೆಗಾಗಿ ಸಮಾನ ಮನಸ್ಕ ಕಲಾವಿದರು ಸ್ಥಾಪಿಸಿಕೊಂಡಿರುವ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಈಕ್ವಲಿಟಿ’ (ಫೈರ್) ಸಂಘಟನೆ ಶ್ರುತಿ ಬೆಂಬಲಕ್ಕೆ ನಿಂತಿದೆ. ಕವಿತಾ ಲಂಕೇಶ್ ಇದರ ಅಧ್ಯಕ್ಷರಾಗಿದ್ದು, ರೂಪಾ ಅಯ್ಯರ್, ಶ್ರುತಿ ಹರಿಹರನ್, ಚೇತನ್ ಮತ್ತಿತರರು ಸಂಘಟನೆಯಲ್ಲಿದ್ದಾರೆ. ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ‘ಫೈರ್’ ಸಂಘಟನೆ ಶ್ರಮಿಸುತ್ತದೆ ಎಂದು ನಟ ಚೇತನ್ ಮಾಹಿತಿ ನೀಡಿದರು.

ಶ್ರುತಿ ಹರಿಹರನ್ ಮುಗ್ಧ ಹುಡುಗಿ, ಅನ್ಯಾಯವಾಯಿತೆಂದು ಸುಮ್ಮನೆ ಹೇಳಲ್ಲ. ನಿಜವಾಗಿ ಕಿರುಕುಳ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಮೀ ಟೂ ಅಭಿಯಾನ ಬೆಳೆಯುತ್ತಿದ್ದು, ಇದರ ದುರ್ಲಾಭ ಪಡೆಯುವವರೂ ಇದ್ದಾರೆ.

| ರಾಗಿಣಿ ದ್ವಿವೇದಿ ನಟಿ

ಶ್ರುತಿ ಆರೋಪಕ್ಕೆ ತಲೆಬುಡವಿಲ್ಲ. ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಆ ಹುಡುಗಿ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಹಣ ಮತ್ತು ಪ್ರಚಾರಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾರೆ. ಅವರ ಹಿಂದೆ ಅನೇಕರು ಇದ್ದಾರೆ. ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಅರ್ಜುನ್ ಬಗ್ಗೆ ಗೊತ್ತು.

| ಆಶಾರಾಣಿ ಅರ್ಜುನ್ ಪತ್ನಿ

ತಂದೆಯಿಂದ ಶ್ರುತಿ ಕಲಿಯಲಿ

ಅರ್ಜುನ್ ಸರ್ಜಾ ಮೇಲಿನ ಆರೋಪಕ್ಕೆ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಪ್ರತಿಕ್ರಿಯಿಸಿದ್ದು, ‘ನಮ್ಮ ತಂದೆ ಹೇಗೆ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಹೆಣ್ಣು ಮಕ್ಕಳಿಗೆ ತುಂಬ ಗೌರವ ಕೊಡುತ್ತಾರೆ. ಅವರಿಂದ ನಟಿ ಶ್ರುತಿ ಹರಿಹರನ್ ಕಲಿಯುವುದು ಸಾಕಷ್ಟಿದೆ. ಶ್ರುತಿ ಮಾಡಿರುವುದು ಮೂರ್ಖತನದ ಆರೋಪ. ಅದರಲ್ಲಿ ಅರ್ಥವೇ ಇಲ್ಲ. ರಿಹರ್ಸಲ್​ನಲ್ಲಿ ತಬ್ಬಿಕೊಂಡರು ಎಂಬುದು ವಿಷಯವೇ ಅಲ್ಲ. ಆಗಲೇ ಅವರು ದೂರು ನೀಡಬೇಕಿತ್ತು. ಆಗ ಏನೂ ಮಾತನಾಡದೆ ಈಗ ಆರೋಪ ಹೊರಿಸುತ್ತಿರುವ ಉದ್ದೇಶವೇನು’ ಎಂದು ಪ್ರಶ್ನಿಸಿದ್ದಾರೆ. ಮೀ ಟೂ ಎನ್ನುವುದು ಒಳ್ಳೆಯ ಅಭಿಯಾನ. ನಿಜಕ್ಕೂ ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರ ಧ್ವನಿ ಎತ್ತುವುದು ಬಿಟ್ಟು ಏನೇನೋ ಹೇಳುವುದು ಸರಿಯಲ್ಲ. ಜನರು ನಮಗೆ ಬೆಂಬಲ ನೀಡುತ್ತಿದ್ದಾರೆ. ಅದು ಖುಷಿ ನೀಡಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

ಅಭಿಮಾನಿಗಳಿಂದ ಬೆದರಿಕೆ?

ಅರ್ಜುನ್ ಸರ್ಜಾ ಮೇಲೆ ಆರೋಪ ಹೊರಿಸುತ್ತಿದ್ದಂತೆಯೇ ಶ್ರುತಿ ಹರಿಹರನ್​ಗೆ ಅನೇಕ ಬೆದರಿಕೆ ಕರೆಗಳು ಬರುತ್ತಿವೆಯಂತೆ. ‘ಕೆಲವು ನಟರ ಅಭಿಮಾನಿ ಬಳಗಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಯಾರ ಕರೆಗಳನ್ನೂ ನಾನು ಸ್ವೀಕರಿಸುತ್ತಿಲ್ಲ. ಟ್ರೂಕಾಲರ್​ನಲ್ಲಿ ಸರ್ಜಾ ಫ್ಯಾನ್ಸ್ ಕ್ಲಬ್ ಅಂತ ಬರುತ್ತಿದೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವಕೀಲರ ಜತೆ ಮಾತುಕತೆ ನಡೆಸುತ್ತಿದ್ದೇನೆ’ ಎಂದು ಶ್ರುತಿ ಹೇಳಿದ್ದಾರೆ.