ಎಂಥ ಸ್ಥಿತಿಯಲ್ಲೂ ನಗುತ್ತಿದ್ದವರೇ ಆರೂಢ

ವಿಜಯವಾಣಿ ಸುದ್ದಿಜಾಲ ಬೀದರ್
ಚಿದಂಬರಾಶ್ರಮ ಸಿದ್ಧಾರೂಢ ಮಠದಲ್ಲಿ ಐದು ದಿನದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 75ನೇ ಜನ್ಮ ದಿನದ ಅಮೃತ ಮಹೋತ್ಸವಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ನಾಡಿನ ವಿವಿಧೆಡೆ ಸಂತರು, ಸಹಸ್ರಾರು ಭಕ್ತರು ಮೊದಲ ದಿನದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದಿನವಿಡಿ ವಿವಿಧ ಕಾರ್ಯಕ್ರಮ ಶ್ರದ್ಧೆ, ಭಕ್ತಿಯೊಂದಿಗೆ ನಡೆದವು. ಸಂತರು, ಗಣ್ಯರು ಸೇರಿ ಅಪಾರ ಭಕ್ತರು ಶ್ರೀಗಳಿಗೆ ಭಕ್ತಿಭಾವದಿಂದ ಗೌರವಿಸಿದರು.
ವಿಜಯಪುರದ ಮಹಾ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಜೀವನ ದೊಡ್ಡದು. ಇದು ಸಾರ್ಥಕವಾಗಬೇಕು. ಇದು ನಮ್ಮ ಭಾವದ ಮೇಲೆ ಅವಲಂಬಿಸಿದೆ. ಸುಖವಿರಲಿ, ದುಖವಿರಲಿ, ಬಡತನ ಬರಲಿ ಇಲ್ಲವೇ ಸಿರಿತನ ಸಿಗಲಿ, ಎಂಥದ್ದೇ ಪರಿಸ್ಥಿತಿಯಲ್ಲೂ ಮೊಗದಲ್ಲಿ ನಗುವೊಂದಿದ್ದರೆ ಅವರೇ ಆರೂಢರು. ಎಲ್ಲವೂ ಮೀರಿ ನಿಂತು, ಅನಂತತೆ ಅನುಭವ ಪಡೆದವರೇ ಆರೂಢರು. ಅಂಥ ಬದುಕು ಶ್ರೀ ಸಿದ್ಧಾರೂಢರು ಮಾಡಿದ್ದರು. ಶಿವಕುಮಾರ ಶ್ರೀಗಳು ಸಿದ್ಧಾರೂಢರ ಅವತಾರಿ ಎಂದರು.
ಜಗತ್ತು ಅಂದ್ಮೇಲೆ ಎಲ್ಲವೂ ಇದೆ. ಮಾನ, ಅಪಮಾನ ತಪ್ಪಿದ್ದಲ್ಲ. ಸೂರ್ಯನಿಗೆ ಕೆಲವರು ನಿತ್ಯ ಬೈದರೆ, ಮತ್ತೆ ಕೆಲವರು ಹೊಗಳಿ ಪೂಜಿಸುತ್ತಾರೆ. ಆದರೆ ಸೂರ್ಯ ಇದ್ಯಾವುದಕ್ಕೂ ಕಿವಿಕೊಟ್ಟಿಲ್ಲ. ಶಾಂತವಾಗಿ ತನ್ನ ಕೆಲಸ ಮಾಡುತ್ತಿದ್ದಾನೆ. ಪ್ರತಿಯೊಬ್ಬರೂ ಶಾಂತವಾಗಿ ಬಾಳಬೇಕಿದೆ. ನಾವೆಷ್ಟೇ ವರ್ಷ ಬದುಕಿದ್ದರೂ ಅನಂತ, ಆನಂದವಾಗಿರಬೇಕು. ಮನುಷ್ಯ ಜೀವಿ ಭಗವಂತನ ಸುಂದರ ಸೃಷ್ಟಿ. ನಗುನಗುತ್ತ ನಿಲರ್ಿಪ್ತ ಭಾವದಿಂದ ಬದುಕುವ ಮಜಾನೇ ಬೇರೆ ಇದೆ. ಮಠ ಸಣ್ಣದು ಅಥವಾ ದೊಡ್ಡದಿರಬಹುದು. ಆದರೆ ತೃಪ್ತಿ, ನಗು, ಶಾಂತತೆ ಭಾವ ಮಾತ್ರ ಒಂದೇ ಇರಬೇಕು. ಅದೇ ಮುಕ್ತಿ ಅವಸ್ಥೆ ಎಂದು ವ್ಯಾಖ್ಯಾನಿಸಿದರು.
ಇಂಚಲ ಸಾಧು ಸಂಸ್ಥಾನಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಧ್ವಜಾರೋಹಣ ನೆರೆವೇರಿಸಿದರು. ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಸುತ್ತೂರಿನ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ, ಶಂಕರಾನಂದ ಶ್ರೀ, ಗಣೇಶಾನಂದ ಶ್ರೀ, ಮಾತಾ ಲಕ್ಷ್ಮೀ ದೇವಿ, ಸಿದ್ದೇಶ್ವರಿ ತಾಯಿ, ಪರಮಾನಂದ ಸ್ವಾಮೀಜಿ, ಶ್ರದ್ಧಾನಂದ ಶ್ರೀ, ವೃಷಭಲಿಂಗ ಶ್ರೀ ಸೇರಿ ಅನೇಕ ಪೂಜ್ಯರು ಇದ್ದರು. ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ನಿರೂಪಣೆ ಮಾಡಿದರು.
ಇದಕ್ಕೂ ಮುನ್ನ ಶ್ರೀಮಠದಿಂದ ಮಹಾಮಂಟಪವರೆಗೆ ನೂರಾರು ಮುತ್ತೈದೆಯರಿಂದ ಕುಂಭ ಕಲಶ ಮೆರವಣಿಗೆ ವಾದ್ಯ ವೈಭವದಿಂದ ನಡೆಯಿತು. ಅಲಂಕೃತ ಸಾರೋಟಿನಲ್ಲಿ ಶ್ರೀ ಸಿದ್ಧಾರೂಢರ ಭಾವಚಿತ್ರ ಇಡಲಾಗಿತ್ತು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಸಹ ಸಾರೋಟಿನಲ್ಲಿ ಆಸೀನರಾಗಿದ್ದರು. ಭಕ್ತರು ಸಾರೋಟಿನ ಮೇಲೆ ಪುಷ್ಪವೃಷ್ಟಿ ಮಾಡಿ ನಮಿಸಿದರು.