More

    ಕಷ್ಟಗಳನ್ನು ಕ್ಷಣದಲ್ಲೇ ಪರಿಹರಿಸುವ ದೇವಿ

    ಶ್ರೀರಂಗಪಟ್ಟಣ: ಮಮತೆಯಲ್ಲಿ ಕರುಣಾಮಯಿ, ಭಕ್ತರ ಕಷ್ಟಗಳ ನಿವಾರಿಸುವ ಮಹಾಮಾಯಿ. ತನ್ನ ಬಳಿಗೆ ಬಂದ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ ಹಲವು ಪವಾಡಗಳಿಗೆ ಕಾರಣೀಕೃತಳಾದ ಇವಳನ್ನು ಭಕ್ತರು ಕ್ಷಣಾಂಬಿಕೆ ಎಂದು ನಂಬಿ ಆರಾಧಿಸುತ್ತಾರೆ.

    ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ಹಲವು ವಿಶೇಷತೆಯ ಪುಣ್ಯ ನೆಲೆಯಾಗಿದ್ದು, ಇಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದಾದ ಜ್ಯೋತಿರ್ಮಹೇಶ್ವರ ದೇಗುಲ ಸಹ ಅತ್ಯಂತ ಪ್ರಮುಖವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ದೇಗುಲ ಅತ್ಯಂತ ವಿಸ್ತಾರವಾಗಿ ನಿರ್ಮಾಣವಾಗಿದ್ದು, ಇಲ್ಲಿ ನೆಲೆನಿಂತ ತಾಯಿ ಶ್ರೀ ವೇದನಾಯಕಿ ತನ್ನ ವಿಶೇಷ ಮಹಿಮೆಗಳಿಂದ ಹಲವು ಭಕ್ತರನ್ನು ಸೃಷ್ಟಿಸಿಕೊಂಡು ಎಲ್ಲರ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸಿ ಅವರ ಬದುಕಲ್ಲಿ ಹೊಸ ಬೆಳಕು ನೀಡಿದ್ದಾಳೆ.

    ಶ್ರೀಜ್ಯೋತಿರ್ಮಹೇಶ್ವರ ಸ್ವಾಮಿ ಹಾಗೂ ಶ್ರೀ ಚಕ್ರ ಸಮೇತ ವೇದನಾಯಕಿ ಅಮ್ಮನವರ ಮೂರ್ತಿಯನ್ನು ಶ್ರೀ ಆದಿಶಂಕರಚಾರ್ಯರು ಪ್ರತಿಷ್ಠಾಪಿಸಿದ್ದಾರೆ. ಎಲ್ಲಿ ಲಕ್ಷ ಮನೆಗಳಲ್ಲಿ ಜ್ಯೋತಿ ಬೆಳಗುತ್ತಿದ್ದವೋ ಅಂತಹ ಸ್ಥಳದಲ್ಲಿ ಮಾತ್ರ ಈ ಜ್ಯೋತಿರ್ಮಹೇಶ್ವರ ದೇವಾಲಯವನ್ನು ಸ್ಥಾಪನೆ ಮಾಡಲಾಗುತ್ತಿತ್ತು. ಈ ದೇವಾಲಯವನ್ನು 1200 ವರ್ಷಗಳ ಹಿಂದೆ ದಳವಾಯಿಗಳ ಆಳ್ವಿಕೆಯಲ್ಲಿದ್ದ ದೊಡ್ಡನಂಜರಾಜಯ್ಯ ಹಾಗೂ ಚಿಕ್ಕನಂಜರಾಜಯ್ಯ ಅವರ ಕಾಲದಲ್ಲಿ ನಿರ್ಮಾಣ ಮಾಡಿ ಜೀರ್ಣೋದ್ಧಾರಗೊಳಿಸಿದ್ದಾರೆ ಎಂದು ಇತಿಹಾಸದ ಮೂಲಗಳ ಪ್ರಕಾರ ಹೇಳಲಾಗುತ್ತದೆ. ಶ್ರೀರಂಗಪಟ್ಟಣದ ಹೊರಭಾಗದಲ್ಲಿ ನೆಲೆಸಿದ್ದ 1.5 ಲಕ್ಷ ಸಂಖ್ಯೆಯ ಜನರು ಈ ಕ್ಷೇತ್ರದ ಮಧ್ಯ ಭಾಗದಲ್ಲಿರುವ ದೇವಾಲಯದಲ್ಲಿ ನಿತ್ಯ ಜಮಾವಣೆಗೊಂಡು ಏಕ ಕಾಲದಲ್ಲಿ ಲಕ್ಷ ಜ್ಯೋತಿಗಳನ್ನು ಬೆಳಗಿ ದೇವರನ್ನು ಆರಾಧಿಸುತ್ತಿದ್ದ ಹಿನ್ನೆಲೆ ಈ ತಾಣವನ್ನು ಜ್ಯೋತಿರ್ಮಹೇಶ್ವರ ದೇಗುಲ ಎನ್ನಲಾಯಿತು ಎಂದು ತಿಳಿದುಬಂದಿದೆ.

    ಈ ದೇವಾಲಯದಲ್ಲಿ ವೇದನಾಯಕಿ ಅಮ್ಮನವರ ಸಮೇತವಿರುವ ಜ್ಯೋತಿರ್ಮಹೇಶ್ವರಸ್ವಾಮಿ ಪ್ರಧಾನ ದೇವರು. ವಿಷ್ಣುವಿನ ಮೂರ್ತಿಯನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ಗಣಪತಿ, ದಕ್ಷಿಣಮೂರ್ತಿ, ಸಪ್ತಮಾತೃಕೆಯರು, ಕಾಲಭೈರವ, ಅನ್ನಪೂರ್ಣೇಶ್ವರಿ, ಕಾಶಿವಿಶ್ವನಾಥ, ನಟರಾಜ, ಸೂರ್ಯ-ಚಂದ್ರ, ಆಂಜನೇಯ ವಿಶೇಷವಾಗಿ ಬೇರೆಲ್ಲಾ ದೇವಾಲಯಗಳಲ್ಲಿ ವೇಲು ಹಿಡಿದ ಸುಬ್ರಹ್ಮಣ್ಯ ದೇವರು ಕಂಡುಬಂದರೆ, ಇಲ್ಲಿ ಮಾತ್ರ ಕೈಯಲ್ಲಿ ದಂಡ ಹಿಡಿದು ನ್ಯಾಯ ಹೇಳುವ ದಂಡಪಾಣಿ ಸುಬ್ರಹ್ಮಣ್ಯೇಶ್ವರಸ್ವಾಮಿಯು ಇಲ್ಲಿ ನೆಲೆ ನಿಂತಿದ್ದಾರೆ.

    ಅಮ್ಮನವರ ಪಾದಗಳು ಹಂಸ ವಾಹನದ ಮೇಲೆ ನಿಂತಿದ್ದು, ದೃಷ್ಟಿಸಿದಾಗ ಸರಸ್ವತಿ ಸ್ವರೂಪಿಣಿ ಭಂಗಿಯಲ್ಲಿ,ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದು ಲಕ್ಷ್ಮೀ ಸ್ವರೂಪಿಣಿ, ದೇಹ ಮಾತ್ರ ಪಾರ್ವತಿ ಸ್ವರೂಪವಾಗಿ ಭಾಸವಾಗುತ್ತದೆ. ಶ್ರೀ ವೇದನಾಯಕಿ ಅಮ್ಮನ ದೃಷ್ಟಿ ಕೆಳಭಾಗದ ಶಿಲೆಯಲ್ಲಿ ಬರೆಯಲಾಗಿರುವ ಶ್ರೀಚಕ್ರದ ಅಪೂರ್ವ ಬೀಜಾಕ್ಷರಗಳ ಬಿಂದುವಿನ ಮೇಲೆ ಬೀರುವ ಕಾರಣ ಈಕೆಯನ್ನು ಕ್ಷಣಾಂಬಿಕೆ ಎನ್ನಲಾಗುತ್ತದೆ.
    ಊರ ಹೊರಗಿನ ನಿಮಿಷಾಂಬ ದೇವಾಲಯದಲ್ಲಿ ಅಮ್ಮನವರು ಕುಳಿತಿರುವ ಭಂಗಿಯಲ್ಲಿದ್ದು, ಅಲ್ಲಿನ ಶ್ರೀಚಕ್ರದಲ್ಲಿ ಮಂತ್ರಗಳಿಲ್ಲ. ಊರ ಒಳಗಿನ ಶ್ರೀವೇದನಾಯಕಿ ಅಮ್ಮನವರು ನಿಂತಿರುವ ಭಂಗಿಯಲ್ಲಿದ್ದ ಶ್ರೀಚಕ್ರ ಬೀಜಾಕ್ಷರಗಳಿಂದ ಕೂಡಿದೆ.
    ಶ್ರೀ ವೇದನಾಯಕಿ ತನ್ನ ಪಾದದ ಬಳಿ ಇರುವ ಮಂತ್ರಸಹಿತ ಬೀಜಾಕ್ಷರಗಳ ಶ್ರೀಚಕ್ರದ ಬಿಂದುವಿನ ಮೇಲೆ ದೃಷ್ಟಿ ಬೀರಿ ಕ್ಷಣ ಮಾತ್ರದಲ್ಲೇ ವರ ನೀಡಿ ತನ್ನ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ತೋರಿ ಕ್ಷಣಾಂಬಿಕೆಯಾಗಿದ್ದಾಳೆ.

    ಜ್ಯೋತಿರ್ಮಹೇಶ್ವರ, ವೇದನಾಯಕಿ ಕ್ಷಣಾಂಬಿಕೆ ದೇವಾಲಯ ಶ್ರೀರಂಗಪಟ್ಟಣದ ಪೇಟೆಬೀದಿಯ ಮುಖ್ಯರಸ್ತೆಯ ಮೂಡಲುಬಾಗಿಲು ಆಂಜನೇಯಸ್ವಾಮಿ ದೇಗುಲದ ಪಕ್ಕದಲ್ಲಿದೆ. ಮೈಸೂರಿನಿಂದ ದೇವಾಲಯಕ್ಕೆ 18 ಕಿಮೀ, ಮಂಡ್ಯದಿಂದ 26 ಕಿಮೀ ಇದೆ. ಸಾರಿಗೆ ಮಾರ್ಗದಲ್ಲಿ ಬಸ್ ಹಾಗೂ ರೈಲುಗಳ ವ್ಯವಸ್ಥೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts