ಶ್ರೀರಂಗಪಟ್ಟಣ: ಮುಂಬರುವ ಲೋಕಸಭಾ ಚುನಾವಣೆಯ ರಾಜಕೀಯ ಹೊಂದಾಣಿಕೆಗಾಗಿ ಕರ್ನಾಟಕದ ಸ್ವಾಭಿಮಾನ ಹಾಗೂ ನಾಡಿನ ರೈತರ ಹಿತಾಸಕ್ತಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಲಿ ಕೊಡುತ್ತಿದ್ದಾರೆ ಎಂದು ರೈತನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ಹೊರಹಾಕಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಬುಧವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಜೋಡಿ ಎತ್ತುಗಳೊಂದಿಗೆ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಎಲ್ಲ ಪಕ್ಷದವರು ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಕಾವೇರಿ ವಿಚಾರದಲ್ಲಿ ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದು, ಇದನ್ನು ತಮಿಳುನಾಡು ಸದುಪಯೋಗಪಡಿಸಿಕೊಂಡು ತನ್ನ ಪಾಲಿನ ನೀರಿಗೆ ಕಾನೂನಿನ ಮೂಲಕ ಒತ್ತಡ ಹಾಕುತ್ತಿದೆ ಎಂದು ಕಿಡಿಕಾರಿದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರುಗಳಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಪುಟ್ಟಮಾದು, ಸಂಚಾಲಕ ಹಳುವಳ್ಳಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ರಾಮಚಂದ್ರು, ಪದಾಧಿಕಾರಿಗಳಾದ ದರಸಗುಪ್ಪೆ ಸುರೇಶ್, ಮಾರಸಿಂಗನಹಳ್ಳಿ ಚಿಕ್ಕ ತಿಮ್ಮೇಗೌಡ, ಸಿದ್ದಪ್ಪ, ಹೆಮ್ಮಿಗೆ ಕೃಷ್ಣ, ಬೆಳಗೊಳ ಸುನೀಲ್, ಕಡತನಾಳು ಶ್ರೀಧರ್, ಬಾಬು ಚಾಮರಾಜು, ಬಲ್ಲೇನಹಳ್ಳಿ ಕೃಷ್ಣ, ಕುಮಾರ್ ಇತರರು ಇದ್ದರು.