ರಾಮನ ಪಥ ದರ್ಶನಕ್ಕೆ ರಾಮಾಯಣ ಎಕ್ಸ್​ಪ್ರೆಸ್

ದೇಶಾದ್ಯಂತ ಶ್ರೀರಾಮ ನಡೆದಾಡಿದ ಸ್ಥಳಗಳೆಲ್ಲವೂ ಹಿಂದು ಧರ್ವಿುಯರಿಗೆ ಪುಣ್ಯ ಕ್ಷೇತ್ರಗಳು. ಇಂಥ ಕ್ಷೇತ್ರಗಳನ್ನೇ ಕೇಂದ್ರೀಕರಿಸುವ ಬಹುನಿರೀಕ್ಷಿತ ‘ಶ್ರೀರಾಮಾಯಣ ಎಕ್ಸ್​ಪ್ರೆಸ್’ ರೈಲು ನ.14ರಂದು ಸಫ್ದಾರ್​ಜಂಗ್ ರೈಲು ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭಿಸಿದೆ. ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನ ಮೂಲದ ಯಾತ್ರಿಕರು ಚೊಚ್ಚಲ ರಾಮಾಯಾಣ ಯಾತ್ರೆಯಲ್ಲಿ ರೈಲು ಹತ್ತಿದ್ದಾರೆ. ಸುಮಾರು 800 ಯಾತ್ರಿಕರಿದ್ದು, 16 ದಿನಗಳು ಶ್ರೀರಾಮನ ಪಾದ ರ್ಸ³ಸಿದ ಸ್ಥಳಗಳಿಗೆ ರೈಲು ತೆರಳಲಿದೆ. ಸ್ಲೀಪರ್ ದರ್ಜೆ ಆಸನಗಳು, ಆಹಾರ, ಧರ್ಮಛತ್ರದಲ್ಲಿ ತಂಗುವ ವ್ಯವಸ್ಥೆ, ಎಸಿ ರಹಿತ ವಾಹನದಲ್ಲಿ ಪುಣ್ಯ ಕ್ಷೇತ್ರಗಳ ಸಂದರ್ಶನ, ಪ್ರಯಾಣ ವಿಮೆ ಸೇರಿ ಎಲ್ಲ ರೀತಿಯ ಅನುಕೂಲಗಳನ್ನು ಈ ಪ್ರಯಾಣದಲ್ಲಿ ಯಾತ್ರಿಕರಿಗೆ ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲತೆಗಾಗಿ ರೈಲ್ವೆ ಇಲಾಖೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಮಂಡಳಿ(ಐಆರ್​ಸಿಟಿಸಿ) ಮ್ಯಾನೇಜರ್ ಯಾತ್ರಿಕರೊಂದಿಗೆ ಇರಲಿದ್ದಾರೆ. ಶ್ರೀಲಂಕಾಗೆ ಪ್ರಯಾಣ ಬೆಳೆಸಲು ಅಪೇಕ್ಷೆ ಇರದ ಯಾತ್ರಿಕರು ನ.29ರಂದು ದೆಹಲಿಯ ಸಫ್ದಾರ್​ಜಂಗ್ ರೈಲು ನಿಲ್ದಾಣಕ್ಕೆ ಹಿಂದಿರುಗಲಿದ್ದಾರೆ.

ಇನ್ನೂ ಮೂರು ಕಡೆಯಿಂದ ರೈಲು ವ್ಯವಸ್ಥೆ

ರಾಮಾಯಣ ಎಕ್ಸ್​ಪ್ರೆಸ್​ಗೆ ಅಭೂತಪೂರ್ವ ಸ್ಪಂದನೆ ಸಿಗುತ್ತಿರುವ ಹಿನ್ನೆಲೆ ಶೀಘ್ರದಲ್ಲೇ ರಾಜ್​ಕೋಟ್, ಜೈಪುರ, ಮಧುರೈನಿಂದಲೂ ರಾಮಾಯಣ ಎಕ್ಸ್​ಪ್ರೆಸ್ ರೈಲು ಸಂಚಾರ ಆರಂಭಿಸಲು ಮಂಡಳಿ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧುರೈನಿಂದ ಹೊರಡುವ ರೈಲು ದರ್ಭಂಗಾ, ನಾಸಿಕ್, ದೇವಿಪಟಿನಂ, ಥಿರುಪುಳ್ಳನಿ ಮೂಲಕ ಸಂಚರಿಸಲಿದೆ. ಜೈಪುರದಿಂದ ಹೊರಡುವ ರೈಲು ಆಳ್ವಾರ್, ರೆವಾರಿಯಲ್ಲಿ ಯಾತ್ರಿಕರನ್ನು ಹತ್ತಿಸಿಕೊಂಡು ರಾಮಾಯಣ ಪ್ರವಾಸ ಆರಂಭಿಸುವಂತೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಸರ್ಕಾರದಿಂದ ಇದು ಉತ್ತಮ ಹೆಜ್ಜೆ. ಒಂದೇ ಬಾರಿಗೆ ಇಷ್ಟೊಂದು ಸ್ಥಳಗಳಿಗೆ ಭೇಟಿ ನೀಡುವ ಬಗ್ಗೆ ನಾನು ಎಂದಿಗೂ ಚಿಂತಿಸಿರಲಿಲ್ಲ. ನಮ್ಮಂಥ ವೃದ್ಧರಿಗೆ ಸುರಕ್ಷಿತವಾಗಿ ಶ್ರೀರಾಮ ದರ್ಶಿಸಿದ ಸ್ಥಳಗಳನ್ನು ನೋಡುವುದು ರೈಲ್ವೆಯಿಂದ ಸಿಗುತ್ತಿರುವ ಅನುಕೂಲ.

| ತಿಲಕ್ ಸಿಂಗ್ ಚೌಹಾಣ್, ಗ್ವಾಲಿಯರ್ ಮೂಲದ ರಾಮಾಯಣ ಎಕ್ಸ್​ಪ್ರೆಸ್ ಯಾತ್ರಿಕ

 

ಹಳಿಗೆ ಮತ್ತಷ್ಟು ರಾಮಾಯಣ ಎಕ್ಸ್​ಪ್ರೆಸ್

  • ನ.22 – ಜೈಪುರದಿಂದ ಹೊರಡುವ ರಾಮಾಯಣ ಎಕ್ಸ್​ಪ್ರೆಸ್​ಗೆ ಚಾಲನೆ
  • ಡಿ.7 – ರಾಜ್​ಕೋಟ್​ನಿಂದ ಹೊರಡುವ ರಾಮಾಯನ ಎಕ್ಸ್​ಪ್ರೆಸ್​ಗೆ ಚಾಲನೆ

ಯಾತ್ರೆಯಲ್ಲಿ ಎರಡು ಪ್ರಮುಖ ಭಾಗಗಳು

ಭಾರತದ ಸ್ಥಳಗಳು

ವನವಾಸ ಮತ್ತು ಸೀತಾ ಅನ್ವೇಷಣೆಯಲ್ಲಿ ಶ್ರೀರಾಮ ಸಂಚರಿಸಿದ ಅಯೋಧ್ಯೆ, ಹನುಮಾನ್ ಗರ್ಹಿ, ನಂದಿಗ್ರಾಮ, ಜನಕ್​ಪುರ, ವಾರಾಣಸಿ, ಪ್ರಯಾಗ್, ಶ್ರಿಂಗವೇರ್​ಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂನಲ್ಲಿ ರೈಲು ನಿಲ್ಲಲಿದೆ. ಯಾತ್ರಿಕರು ಸ್ಥಳೀಯ ಹಿನ್ನೆಲೆ ತಿಳಿದು, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

ಶ್ರೀಲಂಕಾಗೂ ಪ್ರಯಾಣ

ಶ್ರೀಲಂಕಾದಲ್ಲಿ ರಾವಣನ ಬಂಧನದಲ್ಲಿದ್ದ ಸೀತೆಯನ್ನು ಸಾಗರವನ್ನು ದಾಟಿ ಶ್ರೀರಾಮ ರಕ್ಷಿಸಿದ ಹಿನ್ನೆಲೆ ರಾಮಾಯಣ ಯಾತ್ರೆ ಪ್ಯಾಕೇಜ್​ನಲ್ಲಿ ಶ್ರೀಲಂಕಾದಲ್ಲಿನ ಸ್ಥಳಗಳ ಭೇಟಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದಕ್ಕೆ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ರಾಮೇಶ್ವರಂ ಭೇಟಿ ಬಳಿಕ ಚೆನ್ನೈನಿಂದ ಕೊಲಂಬೊಗೆ ವಿಮಾನದಲ್ಲಿ ತೆರಳಿ, ಪ್ರಯಾಣಿಕರು ಅಲ್ಲಿ 5 ರಾತ್ರಿ ಹಾಗೂ 6 ದಿನಗಳ ಶ್ರೀಲಂಕಾ ಭೇಟಿ ಪಡೆಯಬಹುದು. ಪ್ರತಿ ಯಾತ್ರಿಕರಿಗೆ 47,600 ರೂ. ನಿಗದಿಪಡಿಸಲಾಗಿದೆ. ಕ್ಯಾಂಡಿ, ನುವಾರಾ ಎಲಿಯಾ, ಕೊಲಂಬೊ, ನೆಗೊಂಬೊವನ್ನು ಯಾತ್ರಿಕರು ವೀಕ್ಷಿಸಲಿದ್ದಾರೆ.

ಮೊದಲ ಪ್ರಯಾಣಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಪರಿಶೀಲಿಸಿ, ವರ್ಷಕ್ಕೆ ಎಷ್ಟು ಬಾರಿ ‘ರಾಮಾಯಣ ದರ್ಶನ’ ಆಯೋಜಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು.

| ರಜನಿ ಹಸೀಜಾ, ನಿರ್ದೇಶಕರು (ಪ್ರವಾಸೋದ್ಯಮ) ಐಆರ್​ಸಿಟಿಸಿ