ಮೌಢ್ಯಗಳಿಗೆ ಬಲಿಯಾಗ ಬೇಡಿ

ಪಂಚನಹಳ್ಳಿ: ಜನರು ತಮ್ಮಲ್ಲಿರುವ ಬುದ್ಧಿ ಬಳಕೆ ಮಾಡಿಕೊಂಡು ಬದುಕಬೇಕೆ ಹೊರೆತು ದೇವರು, ಸಂತರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಬೂಟಾಟಿಕೆಗೆ ಬಲಿಯಾಗಬಾರದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶುಕ್ರವಾರ ಹ್ಯಾರಲಘಟ್ಟದಲ್ಲಿ ಹಮ್ಮಿಕೊಂಡಿದ್ದ ಯೋಗಶಿಬಿರ ಸಮಾರೋಪ, ಯೋಗ ದಿನದರ್ಶಿಕೆ ಬಿಡುಗಡೆ ಮತ್ತು ಲಿಂಗೈಕ್ಯ ಡಾ. ವೈ.ಸಿ.ವಿಶ್ವನಾಥ ಅವರ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಮ್ಮ ಕಷ್ಟದ ನಿವಾರಣೆಗೆ ಜನರು ಜಾತಕದ ಮೌಢ್ಯಗಳಿಗೆ ಬಲಿಯಾಗುತ್ತಾರೆ. ಆದರೆ ತಾವು ದುಡಿದ ಹಣದಲ್ಲಿ ಒಂದಿಷ್ಟು ಬಳಕೆ ಮಾಡಿಕೊಂಡು ಉಳಿದ ಹಣ ಕೂಡಿಡುತ್ತ ಹೋದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ದುಡಿದ ಹಣಕ್ಕಿಂತ ಹೆಚ್ಚಿಗೆ ದುಶ್ಚಟಗಳಿಗೆ ವ್ಯಯಿಸಿದರೆ ಬಡತನ ಹೆಚ್ಚಾಗುತ್ತದೆ. ಎಲ್ಲ್ಲ ಆಸನಗಳಿಗಿಂತ ಪ್ರಾಣಾಯಾಮ ಅತ್ಯಂತ ಪರಿಣಾಮಕಾರಿಯಾದುದು. ಉಸಿರಿನ ಮೇಲೆ ನಿಯಂತ್ರಣವಿಟ್ಟುಕೊಳ್ಳಲು ಪ್ರಾಣಾಯಾಮ ಸಹಕಾರಿಯಾಗುತ್ತದೆ. ಪ್ರಾಣಾಯಾಮದಿಂದ ಆಯಸ್ಸು ಹೆಚ್ಚುತ್ತದೆ ಎಂದು ಹೇಳಿದರು.