ದಕ್ಷಬ್ರಹ್ಮನ ಕೋಪ

ಶರ್ವಾಣಿ ಕಣ್ಣೀರಿಟ್ಟಳು. ಹಿರಿಯನಾದ ತಂದೆಗೆ ಯಾರು ಬುದ್ಧಿ ಹೇಳಬೇಕು? ತಂದೆ, ಗಂಡ ಇಬ್ಬರ ನಡುವಣ ವೈಷಮ್ಯ ಈ ಯಾಗಾಚರಣೆಯಲ್ಲಿ ಉಪಶಮನವಾಗುವಂತಿದ್ದರೆ? ಯಾಗದಲ್ಲಿ ಹವಿಸ್ಸು, ಚರು, ಸಮಿತ್ತು, ದರ್ಭೆ ಎಲ್ಲ ಭಸ್ಮವಾಗುವಂತೆ, ಕಾಮಕ್ರೋಧಗಳೂ ಸುಟ್ಟು ಬೂದಿಯಾಗಬೇಡವೇ? ಆಗಲ್ಲವೇ ನೂತನ ಸೃಷ್ಟಿ? ಹಳೆಯದು ಹೋಗಿ ಹೊಸದು ಬರುವ ತಂತ್ರ. ವಿಶ್ವತಂತ್ರ ಈ ಯಜ್ಞ ಎನ್ನುತ್ತಾರೆ! ತಂದೆಗೇಕೆ ತಿಳಿಯುತ್ತಿಲ್ಲ?

***

ಪಾರ್ವತಿಯ ದಿಬ್ಬಣ ಇದೀಗ ದಕ್ಷಯಾಗದ ಸ್ಥಳದ ಹತ್ತಿರ ಹತ್ತಿರಕ್ಕೆ ಬರುತ್ತಿದೆ. ಅವಳ ಪರಿವಾರದ ವಾದ್ಯಗಳ ಲಯಬದ್ಧತೆಗೆ ಯಾಗಭೂಮಿಯ ಸದಸ್ಯರು ಪುಳಕಿತರಾಗಿ, ಅತ್ತ ನೋಡಿ, ಸಾಮಾನ್ಯ ವೀಕ್ಷಕರು, ಆಹ್ವಾನಿತರು ಮೇಲೆದ್ದು ನಿಂತು ವೃಷಭಧ್ವಜಪತ್ನಿಗೆ ವಂದಿಸುತ್ತಾರೆ. ಪಾರ್ಷದರು ಕುಣಿಯುತ್ತಾರೆ. ನಾನಾ ವಿಧ ತಾಳವಾದ್ಯಗಳು ಭೋರ್ಗರೆಯುತ್ತಾ ಗಗನವೇ ಬಿರಿಯುವಂತಾದ ಶಬ್ದಕ್ಕೆ ದೇವಗಣಗಳೂ ಬೆಚ್ಚುತ್ತಾರೆ!

ದಕ್ಷನಿಗೆ ಕೋಪ ಬರುತ್ತಿದೆ. ‘‘ಯಾವಳಿವಳು ಅಧಿಕ ಪ್ರಸಂಗಿ? ಪುತ್ರಿಯಾದರೇನು? ಮನೆ ಬಿಟ್ಟು ಹೋದಮೇಲೆ ಎಂಥ ಸಂಬಂಧ? ತಾನು ಇಷ್ಟಪಡದ ಒಬ್ಬನೊಡನೆ ವಿವಾಹವೆಂದರೆ, ಇದೆಂತಹ ಮದುವೆ? ಎಂತಹ ಅಳಿಯ? ಈಗೇಕೆ ಬರಬೇಕು? ಕರೆದವರು ಯಾರು? ಕರೆಯದೆ ಬರಬಾರದೆಂಬ ಮರ್ಯಾದೆಯೂ ಗೊತ್ತಿಲ್ಲದವಳು ಗೃಹಿಣಿಯೇ? ಸ್ತ್ರೀಯೇ? ಅತಿಥಿಯೇ…?’’

ದಕ್ಷನ ಮುಖ ಗಂಟಿಕ್ಕಿದೆ. ಹುಬ್ಬುಗಳು ಕಾಮೋಡಗಳಂತೆ ಒಂದಕ್ಕೊಂದು ಅಪ್ಪಳಿಸಿ ಅಲ್ಲಿ ಸಿಡಿಲು ಗುಡುಗುಗಳ ಆರ್ಭಟಕ್ಕೆ ಮುನ್ಸೂಚನೆ. ಅದನ್ನು ತಡೆಯಬಲ್ಲವರಾರೂ ಅಲ್ಲಿಲ್ಲ! ಋಷಿಗಳು ಶಾಂತಿಮಂತ್ರ ಜಪಿಸುತ್ತಿದ್ದಾರೆ.

ಲೋಕಕೆಲ್ಲಕೆ ಅಭಯ ನೀಡು, ದೇವದೇವನೆ! ಶಾಂತಿಯ,

ಕಲ್ಲು ಹೃದಯದಿ ಕರುಣೆಯಿರಲಿ, ಕರಗಿ ತೋರಿಸು ನೀತಿಯ.

ದಕ್ಷ ದುಡುಕಿದ; ದೇವಹೇಳನ, ಪಾಪವೆಂಬುದನರಿತವ!

ಲೋಕ ತುಂಬುವ ಕಾರ್ಯದಕ್ಷನ, ಮೇರೆತಪ್ಪಿದ ಗರುವವ,

ಮೆಲ್ಲ ತಿದ್ದುತ, ಅವನ ಪೊರೆಯುತ, ಯಜ್ಞ ರಕ್ಷಿಸು! ದೇವನೆ!

ಪಾಪವರಿಯಳು, ಮುಗುದೆ, ಮಾನಿನಿ. ಸಹಿಸುತಿರುವಳು ನೋವನೆ!

ರಕ್ಷಕನು, ನೀನೆಲ್ಲೆ ಇರುತಿರು, ರಕ್ಷಕನು ನೀನೆ ಅಲ್ಲವೆ?

ದಕ್ಷ ಯಾರಿವ? ಭವನು ಯಾರಿವ? ಶಿವೆಯು ನಿನ್ನವಳಲ್ಲವೆ?

ಭಯವು ಎಲ್ಲೆಡೆ ಬಿರಿಯುತಿಲ್ಲಿಹ ಹೃದಯಗಳು ಹೂವಲ್ಲವೆ?

ಹೂವು ನಾಭಿಯಲಿರುವ ದೇವನೆ? ರಕ್ಷೆ ನಿನ್ನದೆ ಅಲ್ಲವೆ?

ಯಜ್ಞ ಮುಗಿಯಲಿ, ಪರಮ ಮಂಗಳ ನೆಲೆಸಿ ಎಲ್ಲೆಡೆ, ಸಂತಸ

ಬುದ್ಧಿಯನು ನೀಡಿವಗೆ, ದಕ್ಷಗೆ, ತಿಳಿಯಾಗಿ ಹೃದಯದ ಆಗಸ.

ಲೀಲೆ ತಿಳಿಯದು! ದಕ್ಷ ನಿಷ್ಠನು, ಕಾರ್ಯತತುಪರ, ಉಗ್ರನು!

ಲಯವ ಮೀರಿದ; ಕುಪಿತ ಲಯಪತಿ, ಮೊದಲೆ ಉಗ್ರನು, ವ್ಯಗ್ರನು!

ಲಯಕೆ ಸೃಷ್ಟಿಗೆ ಬಿಡದ ಬಂಧನ, ಸಂಬಂಧವಲ್ಲಿಯೆ ಕಾಂಬುದು!

ವಿರಸ ಸಹಿಸದು ಜಗದ ಗತಿಯಲಿ, ಕಾಲ ಉರುಳಿದು ಎಂಬುದು

ಋಷಿಗಳ ಪ್ರಾರ್ಥನೆ ದಕ್ಷನ ಹೃದಯಕ್ಕೆ ಹೇಗೆ ಕೇಳಿಸಬೇಕು?

***

‘‘ಮಗಳೇ, ಬಂದೆಯಾ?’’ ಎನ್ನುತ್ತಾ ದಕ್ಷಪತ್ನಿ, ದಾಕ್ಷಾಯಣಿಯ ಸೋದರಿಯರು ಪಾರ್ವತಿಯನ್ನು ಆಲಿಂಗಿಸಿ ಸ್ವಾಗತಿಸಿದರು. ಪಾರ್ವತಿಯ ಮೈ ಸಡಿಲಲಿಲ್ಲ! ಆಲಿಂಗನಕ್ಕೆ ಸ್ಪಂದಿಸಲಿಲ್ಲ. ಕಂಗಳು ತಂದೆಯ ಮುಖವನ್ನೇ ನೋಡುತ್ತಿದ್ದವು. ಅಲ್ಲಿದ್ದ ತಿರಸ್ಕಾರ, ಹಗೆಯೆಂಬ ಭಾವನೆ, ‘‘ಇವಳು ಅನಪೇಕ್ಷಿತ’’ ಎಂಬ ಅತಂಕದ, ತಾನಿಲ್ಲಿ ಅನಿಷ್ಟದ ಸಾಂಕೇತಿಕ ಮೂರ್ತಿಯಾದುದರ ಅಪಮಾನ ಭಾವ, ಸತಿಯನ್ನು ಸುಡುತ್ತಿತ್ತು. ‘‘ಯಜಮಾನನ ಮಾತು ಕೇಳದೇ ಬಂದದ್ದು ತಪ್ಪಾಯಿತು’’ ಎನ್ನುವ ಭಾವದಲ್ಲಿ ಮೈ ಉರಿಯಲು ಆರಂಭವಾಗಿತ್ತು. ತಾಯಿಯ ಮನಕ್ಕೆ ಅದೂ ಮುಟ್ಟಿತು, ಆಲಿಂಗನದ ಅವಸರದಲ್ಲಿ. ‘‘ಮಗಳೇ! ಮೈ ಏಕೆ ಸುಡುತ್ತಿದೆ? ಪ್ರಯಾಣ ಸುಖಕರವಾಗಿತ್ತೆ? ಪತಿರಾಯರು ಏಕೆ ಬರಲಿಲ್ಲ? ಶಿವಗಣಗಳು ಏಕೆ ರೌದ್ರಭಾವದಲ್ಲಿದ್ದಾರೆ? ಏನಾದರೂ ದಾರಿಯಲ್ಲಿ ತೊಂದರೆಯಾಯಿತೆ?’’ – ತಾಯಿ ಕೇಳುತ್ತಿದ್ದಾಳೆ.