ಸಂಸಾರ ಬಂಧನದ ಮುಕ್ತಿಗಾಗಿ ಸಂಸ್ಕಾರ ಅಗತ್ಯ

ರಬಕವಿ/ ಬನಹಟ್ಟಿ: ಸಂಸಾರ ಬಂಧನದಿಂದ ಮುಕ್ತಿ ಪಡೆಯಲು ಸಂಸ್ಕಾರ ಅತ್ಯಂತ ಅಗತ್ಯವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀಶೈಲ ಸೂರ್ಯ ಸಿಂಹಾಸನ ಪಂಡಿರಾಧ್ಯ ಮಹಾಪೀಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಕಲರಿಗೆ ಒಳ್ಳೆಯದನ್ನು ಬಯಸಿ, ಎಲ್ಲವನ್ನು ಆನಂದದಿಂದ ಸ್ವೀಕರಿಸಿದರೆ ನೆಮ್ಮದಿಯಾಗಿ ಜೀವನ ನಡೆಸಬಹುದು. ವೈರಾಗ್ಯ ತಾಳಲು ಸತತ ಅಧ್ಯಾತ್ಮ ಓದಲೇಬೇಕು ಎಂದೇನಿಲ್ಲ. ಮನುಷ್ಯ ಸದ್ಯದ ಸ್ಥಿತಿಗಿಂತ ಉನ್ನತ ಸ್ಥಿತಿಗೆ ತಲುಪಲು ಸಂಸ್ಕಾರ ಅಗತ್ಯ ಎಂದರು.

ವಿದ್ವಾಂಸ ಮಹೇಶ್ವರ ಸ್ವಾಮೀಜಿ ವಿರಚಿತ ಗಣಸಹಸ್ರನಾಮಾವಳಿ ಪುಸ್ತಕವನ್ನು ಶ್ರೀಶೈಲಂ ದೇವಸ್ಥಾನದ ಆಡಳಿತಾಧಿಕಾರಿ ಶ್ರೀರಾಮಚಂದ್ರ ಮೂರ್ತಿ ಬಿಡುಗಡೆಗೊಳಿಸಿದರು.

ಜೈನಾಪುರದ ರೇಣುಕಾ ಶಿವಾಚಾರ್ಯರು, ಮಹೆಬೂನ್ ನಗರದ ಮಹೇಶ್ವರ ಸ್ವಾಮಿಗಳು, ಹೈದರಾಬಾದ್​ದ ಶಿವನಾಗದೇವ ಸ್ವಾಮೀಜಿ, ಗುಂತಕಲ್​ದ ಶ್ರೀರಾಮಸೇನೆ ಅಧ್ಯಕ್ಷ ರಮೇಶ ಭಂಡಾರು ಮತ್ತು ವೀರಶೈವ ಗುರುಕುಲದ ಪ್ರಾಚಾರ್ಯ ಮಲ್ಲಿಕಾರ್ಜುನ ಶಾಸ್ತ್ರಿಗಳು ಧರ್ಮಸಂದೇಶ ನೀಡಿದರು.

ಅಪಝುಲ್​ಪುರದ ಶಿವಶರಣ ಸರಸಂಬಾ, ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ, ವಿನೋದಕುಮಾರ ಶಾಸ್ತ್ರಿಗಳು, ಮಂಜುನಾಥ ದೇವರು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ 110 ಕ್ಕೂ ಅಧಿಕ ವಟುಗಳಿಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ನೀಡಲಾಯಿತು. ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.