More

  ಜಿಲ್ಲಾಡಳಿತ ಭವನದಲ್ಲಿ ಶೀಘ್ರ ಹೆಲ್ತ್‌ಸೆಂಟರ್, ಜಿಲ್ಲಾಧಿಕಾರಿಯಿಂದ ಆರೋಗ್ಯ ಸೇವೆಗೆ ಹಸಿರು ನಿಶಾನೆ

  ಶಿವರಾಜ ಎಂ. ಬೆಂಗಳೂರು
  ಸುಮಾರು 36 ಇಲಾಖೆ, 500ಕ್ಕೂ ಹೆಚ್ಚು ಸಿಬ್ಬಂದಿ, ಸಾವಿರಾರು ಸಾರ್ವಜನಿಕರು ಸೇರುವ ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಲ್ಲಿ ‘ಪ್ರಾಥಮಿಕ ಆರೋಗ್ಯ ಕೇಂದ್ರ’ ಸ್ಥಾಪಿಸಬೇಕೆಂಬ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳಿಂದ ಹಸಿರು ನಿಶಾನೆ ದೊರೆತಿದೆ. ಯೋಜಿಸಿದಂತೆ ಕಾರ್ಯರೂಪಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಸೇವೆ ಲಭ್ಯವಾಗಲಿದೆ.

  ಬೆಂಗಳೂರಿನಿಂದ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಚಪ್ಪರಕಲ್ಲಿಗೆ 2018ರ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ 2019 ಜನವರಿ 15ರಂದು ಜಿಲ್ಲಾ ಪಂಚಾಯಿತಿ ಕಚೇರಿಗಳು ಸ್ಥಳಾಂತರ ಆದಾಗಿನಿಂದಲೂ ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಅವಶ್ಯಕತೆ ಬಗ್ಗೆ ಸಾರ್ವಜನಿಕರು ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಕಾಲ ಕೂಡಿಬಂದಿಲ್ಲ. ಈಗ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿಯೇ ಕೊಠಡಿ ನಿಗದಿಯಾಗಲಿದೆ ಎನ್ನಲಾಗಿದೆ.

  ಜಿಪಂ ಉಪಾಧ್ಯಕ್ಷೆ ಪ್ರಸ್ತಾವನೆ: ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಜಿಪಂ ಸಭೆಗಳಲ್ಲಿ ಇದನ್ನೇ ಪ್ರಮುಖ ವಿಷಯವಾಗಿ ಚರ್ಚಿಸಿದ್ದಾರೆ. ನೂರಾರು ಸಿಬ್ಬಂದಿ ಸಾವಿರಾರು ಸಾರ್ವಜನಿಕರು ಸೇರುವ ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಡ್ಡಾಯವಾಗಿ ಸ್ಥಾಪನೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು. ಜಿಲ್ಲಾಡಳಿತ ಪ್ರವೇಶ ದ್ವಾರದ ಎಟಿಎಂ ಸೆಂಟರ್ ಪಕ್ಕದಲ್ಲೇ ಕೊಠಡಿಯಿದ್ದು ಅದನ್ನೇ ಅರೋಗ್ಯ ಕೇಂದ್ರಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಏಕಿಷ್ಟು ಮೀನಮೇಷ?: ಕೆಲ ತಿಂಗಳ ಹಿಂದಷ್ಟೆ ಜಿಲ್ಲಾಡಳಿತ ಭವನದಲ್ಲಿ ಆಧಾರ್‌ಕಾರ್ಡ್ ನೋಂದಣಿಗಾಗಿ ಆಟೋದಲ್ಲಿ ಬಂದು ವಾಪಸ್ ಮರಳುತ್ತಿದ್ದ ಶಾಲಾ ವಿದ್ಯಾರ್ಥಿಗಳು ಭವನದ ಎದುರೇ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಸಾಧ್ಯವಾಗದೆ ದೂರದ ಊರುಗಳಿಗೆ ರವಾನಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ಡಿಸಿ ಕಚೇರಿಯಲ್ಲಿ ಆಂಬುಲೆನ್ಸ್ ಸೇವೆಯೂ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಹತ್ತು ಹನ್ನೆರಡು ಕಿಮೀ ದೂರದ ದೊಡ್ಡಬಳ್ಳಾಪುರ ಅಥವಾ ದೇವನಹಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅಷ್ಟೆ ಅಲ್ಲದೆ ಈ ಹಿಂದೆ ಇದೇ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಪ್ರತಿನಿತ್ಯ ಒಂದಿಲ್ಲೊಂದು ಪ್ರತಿಭಟನೆ ಧರಣಿಗಳು ನಡೆಯುವ ಸ್ಥಾನವಾಗಿರುವ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಏಕೆ ಮೀನಮೇಷ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.

  ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಬಗ್ಗೆ ತಿಳಿದಿದೆ. ಸೂಕ್ತ ಕೊಠಡಿ ಹುಡುಕಲು ಸೂಚಿಸಲಾಗಿದೆ. ಅಗತ್ಯ ಸಿಬ್ಬಂದಿ, ಪರಿಕರಗಳೊಂದಿಗೆ ಶೀಘ್ರವೇ ಸೇವೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
  ಪಿ.ಎನ್.ರವೀಂದ್ರ. ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ

  ಜಿಪಂ ದೇವನಹಳ್ಳಿಯ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಾಗಿನಿಂದಲೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತಲೇ ಬಂದಿದ್ದೇವೆ. ಇನ್ನಾದರೂ ಇದಕ್ಕೆ ಕಾಲಕೂಡಿಬರುವಂತಾಗಲಿ.
  ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ

  ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಸೇವೆ ನೀಡಲು ಇಲಾಖೆ ಸಿದ್ಧವಿದೆ. ಸೂಕ್ತ ಕೊಠಡಿಗಾಗಿ ಹುಡುಕಾಟ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಸಮ್ಮಿತಿಸಿರುವುದರಿಂದ ಶೀಘ್ರವೇ ಆರೋಗ್ಯ ಕೇಂದ್ರ ಕಾರ್ಯಾರಂಭ ಮಾಡಲಿದೆ.
  ಮಂಜುಳಾದೇವಿ, ಆರೋಗ್ಯಾಧಿಕಾರಿ, ಬೆಂ.ಗ್ರಾಮಾಂತರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts